ಬೆಂಗಳೂರು : ನಾಡು ನುಡಿಗಾಗಿ ದುಡಿಯುತ್ತಿರುವ ಸಿರಿಗನ್ನಡ ಮಿತ್ರ ತಂಡ
ತನ್ನ 12 ನೇ ವಾರ್ಷಿಕೋತ್ಸವವನ್ನು ನಾಗಶೆಟ್ಟಿಹಳ್ಳಿಯಲ್ಲಿರುವ ಸ್ವಸ್ತಿ ಪೌಂಡೇಷನ್ ಹಾಲ್ ನಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಉಪಾಧ್ಯಕ್ಷರಾದ ಸತೀಶ್ ರೆಡ್ಡಿ ಅವರು ಮಾತನಾಡಿ, ಕನ್ನಡ ಭಾಷೆಯ ಮಹತ್ವ ಬಹಳ ಹಿರಿದಾದುದು. ಈ ಭಾಷೆಯ ಏಳಿಗೆಗೆ ದುಡಿಯಬೇಕಿರುವುದು ನಮ್ಮೆಲ್ಲರ ಹೊಣೆಗಾರಿಕೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಪರಭಾಷಾ ಹಾವಳಿ ಹೆಚ್ಚಾಗಿದೆ. ಹಿಂದಿ ಹೇರಿಕೆಗೆ ಸರಕಾರಗಳೇ ಪ್ರಯತ್ನ ಮಾಡುತ್ತಿವೆ. ಇದನ್ನೆಲ್ಲ ತಡೆದು ನಾವು ಕನ್ನಡವನ್ನು ಬೆಳೆಸಬೇಕಾಗಿದೆ ಎಂದರು.
ಇಂತಹ ಕನ್ನಡ ಕಟ್ಟುವ ಕೆಲಸವನ್ನು ಅನೇಕ ಹೋರಾಟಗಾರರು, ಸಂಘ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಅದರಲ್ಲಿ ಸಿರಿಗನ್ನಡ ಮಿತ್ರ ತಂಡವೂ ಕೂಡ ಒಂದಾಗಿದೆ. ಕಳೆದ 12 ವರ್ಷಗಳಿಂದಲೂ ಸತತವಾಗಿ ಕನ್ಮಡ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇಂದು ಈ ಮಕ್ಕಳೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಇದು ಸಾರ್ಥಕ ಕ್ಷಣ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಕೌಡ್ಲೆ ನಾರಾಯಣ ಶೆಟ್ಟಿ ಮಾತನಾಡಿ, ಈ ನಾಡು ನಮಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ, ನಾಡು ನುಡಿಗೆ ಸೇವೆ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಅಂತಹ ಕರ್ತವ್ಯವನ್ನು ಸಂಘಟನಾತ್ಮಕವಾಗಿ ಮಾಡುವ ಸಲುವಾಗಿ ನಾವು ಸಮಾನ ಮನಸ್ಕರ ಜತೆ ಸೇರಿ ಸಿರಿಗನ್ನಡ ಮಿತ್ರ ತಂಡವನ್ನು ಕಟ್ಟಿಕೊಂಡೆವು. ನಮ್ಮ ಸಂಸ್ಥೆ ಇಂದು 12 ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಸ್ತಿ ಫೌಂಡೇಶನ್ ಮುಖ್ಯಸ್ಥ ಎಂ. ಮುರುಗನ್, ಗಾಯಕ ಕೆ.ರಮೇಶ್ ಜಮದಗ್ನಿ, ಸಿರಿಗನ್ನಡ ಮಿತ್ರತಂಡದ ನಿರ್ದೇಶಕ ಬಿ.ಎಲ್.ಶ್ರೀನಿವಾಸ, ಅಧ್ಯಕ್ಷ ಡಬ್ಲ್ಯೂ ಕೆ.ವೆಂಕಟೇಶಮೂರ್ತಿ, ವಿಶಾಲ್ ಚಂದ್ರ ಮೌಳಿ, ವಿ. ಹೇಮಂತ್ ಕುಮಾರ್, ಪಿ. ಸಿ. ಮಹೇಶ್, ಕಾರ್ಯದರ್ಶಿ ಕೌಡ್ಲೆ ನಾರಾಯಣಶೆಟ್ಟಿ ಮತ್ತಿತರರಿದ್ದರು.

