ಉಪಯುಕ್ತ ಸುದ್ದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಶೀಘ್ರ ಚಾಲನೆ: ತುಷಾರ್ ನಾಥ್

Share It

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಭೂಮಿ ಪೂಜೆಗಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲು ಮುಖ್ಯ ಆಯುಕ್ತ ತುಷರ್ ಗಿರಿ ನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಅನುಷ್ಠಾನಗೊಳಿಸುವ ಸಂಬಂಧ ಬಿ.ಎಸ್.ಡಬ್ಲ್ಯೂ.ಎಂ.ಎಲ್ ಕಛೇರಿಯಲ್ಲಿ ನಡೆದ ಅಂತರ್ ಇಲಾಖೆ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವೈಟ್ ಟಾಪಿಂಗ್ ಅನ್ನು 15 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಪೈಕಿ 13 ಪ್ಯಾಕೇಜ್ ಗಳು ಈಗಾಗಲೇ ಅಂತಿಮಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೆರಡು ಪ್ಯಾಕೇಜ್‌ಗಳು ಸರ್ಕಾರದ ಹಂತದಲ್ಲಿದ್ದು, ಶೀಘ್ರ ಭೂಮಿ ಪೂಜೆ ನೆರವೇರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಯಿತು.

ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಸಂಬಂಧ ಜಲಂಡಳಿಯ ನೀರಿನ ಹಾಗೂ ಒಳಚರಂಡಿ ಕೊಳವೆ, ಬೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಸಂಸ್ಥೆಯ ಕೇಬಲ್‌ಗಳು, ಗೇಲ್ ಗ್ಯಾಸ್ ಪೈಪ್ ಲೈನ್ ಗಳ ಬದಲವಾಣೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸ್ಥಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದರು.

ಯಾವುದೇ ಇಲಾಖೆಯಾಗಲಿ ಈಗಲೇ ಸಮೀಕ್ಷೆ ನಡೆಸಿಕೊಂಡು ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ವೇಳೆ ಏನಾದರು ಬದಲಾವಣೆಗಳಿದ್ದಲ್ಲಿ ಮಾಡಿಕೊಳ್ಳಬೇಕು. ಜಲಮಂಡಳಿಯಿಂದ ರಸ್ತೆಯ ಮೂಲಕ ಕೊಳವೆ ಅಳವಡಿಸದೆ ಎರಡೂ ಬದಿ ಕೊಳವೆಗಳನ್ನು ಅಳವಡಿಸಿಕೊಳ್ಳಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ರಸ್ತೆ ಕತ್ತರಿಸಲು ಅನುಮತಿ ನೀಡುವುದಿಲ್ಲೆ ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯಲಿದೆಯೇ ಆ ಪಟ್ಟಿಯನ್ನು ಈಗಾಗಲೇ ಎಲ್ಲಾ ಇಲಾಖೆಗಳಿಗೆ ನೀಡಲಾಗಿದೆ. ಅದರ ಪ್ರಕಾರ ಈಗಾಗಲೇ ಜಂಟಿ ಪರಿಶೀಲನೆ ನಡೆಸಲಾಗಿದ್ದು, ಅಂತಿಮ ಹಂತದ ಸಿದ್ದತೆಗಳನ್ನು ಮಾಡಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸೂಚನೆ ನೀಡಿದರು.

ಯುಟಿಲಿಟಿಗೆ ಸಮಗ್ರ ವ್ಯವಸ್ಥೆ:

ವೈಟ್ ಟಾಪಿಂಗ್ ಕಾಮಗಾರಿ ನಡೆಸುವ ರಸ್ತೆಗಳ ಎರಡೂ ಬದಿ ಪಾದಚಾರಿ ಮಾರ್ಗದಲ್ಲಿ ಯುಟಿಲಿಟಿಗಾಗಿ ಡಕ್ಟ್ಸ್ ಗಳ ಅಳವಡಿಕೆಗೆ ಸಮಗ್ರ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ಸಂಬಂಧ ಆಯಾ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಯಿತು.

ಸಂಚಾರ ಮಾರ್ಗ ಬದಲಾವಣೆ: ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಕಡೆ ಸಂಚಾರ ಪೊಲೀಸ್ ವಿಭಾಗದ ಜೊತೆ ಸಮನ್ವಯ ಸಾಧಿಸಿ ಮಾರ್ಗ ಬದಲಾವಣೆ ಮಾಡಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿಯ ವೇಳೆ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಂತ-ಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ರಧಾನ ಅಭಿಯಂತರರಾದ ಪ್ರಹ್ಲಾದ್ ಮಾತನಾಡಿ, ನಗರದಲ್ಲಿ ಸುಮಾರು 150 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಅಧಿಕಾರಿಗಳು ಕಾಮಗಾರಿ ನಡೆಯುವ ಪ್ರದೇಶದಲ್ಲಿ ಪರ್ಯಾಯ ರಸ್ತೆ ಗುರುರಿತಿಸಿ ಕೊಡಬೇಕೆಂದು ಮನವಿ ಮಾಡಿದರು. ಜೊತೆಗೆ ಕಾಮಗಾರಿಯನ್ನು ಹಗಲು-ರಾತ್ರಿ ನಡೆಸಿ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಈ ವೇಳೆ ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ಜಲಮಂಡಳಿ ಮುಖ್ಯ ಅಭಿಯಂತರರಾದ ಗಂಗಾಧರ್, ವೆಂಕಟೇಶ್, ದೇವರಾಜ್, ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು, ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ, ಗೇಲ್ ಗ್ಯಾಸ್ ಸೇರಿದಂಗೆ ಇನ್ನಿತರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page