ರಾಜಕೀಯ ಸುದ್ದಿ

ರಾಜ್ಯ ಬಿಜೆಪಿಗೆ ಹೊಸ ಉಸ್ತುವಾರಿಯಾಗಿ ರಾಧಾ ಮೋಹನ್ ದಾಸ್ ನೇಮಕ

Share It

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದೆ.

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ಇದೀಗ ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ. ಈವರೆಗೆ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್​ ಸಿಂಗ್ ಗೆ ಕೊಕ್ ನೀಡಿರುವ ಹೈಕಮಾಂಡ್, ರಾಧಾಮೋಹನ್ ದಾಸ್ ಅವರನ್ನು ನೇಮಕ ಮಾಡಿದೆ. ಸುಧಾಕರ್ ರೆಡ್ಡಿ ಅವರನ್ನು ಸಹ ಉಸ್ತುವಾರಿಯನ್ನಾಗಿಸಲಾಗಿದೆ.

ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

ಅರುಣ್ ಸಿಂಗ್ ಹಿಂದೆ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿದ್ದರು. ರಾಧಮೋಹನ್ ದಾಸ್ ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಯಾಗಿದ್ದರು. ಇದೀಗ ಅರುಣ್ ಸಿಂಗ್ ಅವರನ್ನ ಬದಲಿಸಿ ರಾಧಮೋಹನ್ ದಾಸ್ ಅವರನ್ನು ಉಸ್ತುವರಿಯನ್ನಾಗಿ ನೇಮಕ ಮಾಡಲಾಗಿದೆ.

ಲೋಕಸಭಾ ಚುನಾವಣೆ ವೇಳೆ ರಾಜ್ಯ ಬಿಜೆಪಿಯಲ್ಲಿ ಸ್ಫೋಟಗೊಂಡಿದ್ದ ಅಸಮಾಧಾನ ಶಮನ ಮಾಡುವಲ್ಲಿ ರಾಧಮೋಹನ್ ದಾಸ್ ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಜೊತೆ ಸೇರಿ ಅಸಮಾಧಾನಗೊಂಡಿದ್ದ ನಾಯಕರನ್ನು ಸಮಾಧಾನ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ರಾಧಮೋಹನ್ ದಾಸ್ ಟಿಕೆಟ್ ವಂಚಿತರಾಗಿ ಬೇಸರಗೊಂಡಿದ್ದ ನಿಕಟಪೂರ್ವ ಸಂಸದರಾದ ಪ್ರತಾಪ್ ಸಿಂಹ, ಸಂಗಣ್ಣ ಕರಡಿ, ಸದಾನಂದಗೌಡ ಸೇರಿ ಇತರೆ ನಾಯಕರನ್ನ ಕರೆದು ಮಾತನಾಡಿದ್ದರು.

ಇನ್ನು ಕೊನೆ ಕ್ಷಣದಲ್ಲಿ ಉತ್ತರ ಕನ್ನಡ, ಬೆಳಗಾವಿ, ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್ ​​ಅನ್ನು ಹೈಕಮಾಂಡ್​ ನಾಯಕರ ಜೊತೆ ಚರ್ಚಿಸಿ ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್​, ಅರುಣ್ ಸಿಂಗ್ ಅವರನ್ನು ಬದಲಾಯಿಸಿ ರಾಧಮೋಹನ್ ದಾಸ್ ಅವರನ್ನೇ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.


Share It

You cannot copy content of this page