ಬೆಂಗಳೂರು: ರಾಜ್ಯದಲ್ಲಿ ಕಳೆದ ಚುನಾವಣೆಗಿಂತ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆಯಾದರೂ, ಇಲ್ಲಿನ ಪರಿಸ್ಥಿತಿ ಗೆ ಅನುಗುಣವಾಗಿ ಸ್ಥಾನಗಳನ್ನು ಗೆಲ್ಲಲಾಗಿಲ್ಲ ಎಂದು ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯಕ್ಕೆ ಹಾಜರಾಗುವ ಸಂಬಂಧ ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಇಂದು ಗೆದ್ದ ಸಂಸದರು ಮತ್ತು ಸೋತ ಅಭ್ಯರ್ಥಿಗಳ ಜತೆ ಸಂವಾದ ನಡೆಸಿದರು. ಗೆದ್ದವರಿಗೆ ಅಭಿನಂದನೆ ಹೇಳುವ ಮೂಲಕ, ಸೋತವರಿಗೆ ಎದೆಗುಂದದಂತೆ ಧೈರ್ಯ ಹೇಳಿದರು. ಆದರೆ, ಎಲದಲ ಅಧಿಕಾರವಿದ್ದು ತಮ್ಮ ತಮ್ಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ನ್ನು ಗೆಲ್ಲಿಸಿಕೊಂಡು ಬರಲಾರದ ಸಚಿಚರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸಿಎಂ, ಡಿಸಿಎಂ ಸೇರಿದಂತೆ ಬಹುತೇಕ ಸಚಿವರು ತಮ್ಮ ಸ್ವಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಸರಕಾರದ ಐದು ಗ್ಯಾರಂಟಿಗಳು ಮತ್ತು ಕೇಂದ್ರದಿಂದ ಘೋಷಣೆ ಮಾಡಿದ ಗ್ಯಾರಂಟಿಗಳನ್ನು ಸರಿಯಾಗಿಬಜನರಿಗೆ ಅರ್ಥ ಮಾಡಿಸುವಲ್ಲಿ ಆಯಾ ಜಿಲ್ಲೆಯ ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಮತ್ತಷ್ಟು ಪರಿಣಾಮಕಾರಿ ಕೆಲಸಾಡುವಂತೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಸಂಸದರು ಗೆದ್ದಿದ್ದಾರೆ. ಡಿಸಿಎಂ ಸ್ವತಃ ತಮ್ಮ ಸಹೋದರನನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಹಿರಿಯ ಸಚಿವರಾದ ರಾಮಲಿಂಗ ರೆಡ್ಡಿ, ಶಿವಾನಂದ ಪಾಟೀಲ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಳ್ಳಲು ಸೋತಿದ್ದಾರೆ. ಕೆ.ಜೆ.ಜಾರ್ಜ್, ಡಾ. ಜಿ.ಪರಮೇಶ್ವರ, ಡಾ.ಸುಧಾಕರ್, ಚೆಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಡಿ.ಸುಧಾಕರ್, ದಿನೇಶ್ ಗುಂಡೂರಾವ್ ಸೇರಿನಕೆಲ ಸಚಿವರ ಜಿಲ್ಲೆಗಳಲ್ಲಿ ಗೆಲ್ಲುವ ಅವಕಾಶವಿದ್ದರೂ ಅದನ್ನು ಸರಿಯಾಗಿ ಯೋಜನೆ ರೂಪಿಸದೆ ಸೋತಿದ್ದಾರೆ. ಈ ಫಲಕ್ಕೆ ಸಚಿವ ಸ್ಥಾನ ಕೊಡಬೇಕಾ ಎಂದು ರಾಹುಲ್ ಕಿಡಿಕಾರಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಅಮುದಾಯದ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದಕ್ಕೆ ಕಾರಣ ಯಾರು? ಎಂದು ವಿಶ್ಲೇಷಣೆ ಮಾಡಿಕೊಳ್ಳಬೇಕು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ಉತ್ತಮ ಪ್ರದರ್ಶನ ತೋರಬೇಕು. ಇಲ್ಲವಾದಲ್ಲಿ, ಅಧಿಕಾರ ಬೇಕಾ ಬೇಡವಾ ಎಂಬ ಕುರಿತು ಪರಾಮರ್ಶಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಹಿಡಿತವಿರುವ ಕಲ್ಯಾಣ ಕರ್ನಾಟಕ ಸ್ವೀಪ್ ಮಾಡಿರುವುದು ಬಿಟ್ಟರೆ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಮತ್ತು ಎಚ್.ಸಿ ಮಹದೇವಪ್ಪ ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡಿದ್ದು ಬಿಟ್ಟರೆ ಉಳಿದ ಮಂತ್ರಿಗಳ್ಯಾರು ಅಂತಹ ಉತ್ತಮ ಪ್ರದರ್ಶನ ತೋರಿಲ್ಲ, ಇದು ಅಧಿಕಾರದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ರಾಗಾ ಎಚ್ಚರಿಕೆ ನೀಡಿದ್ಸಾರೆ ಎನ್ನಲಾಗಿದೆ.

