ಬೆಂಗಳೂರು: ಬಿಸಿಲಿನಿಂದ ತತ್ತರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊನೆಗೂ ಬೇಸಿಗೆ ಮಳೆ ಬಂದಿದೆ.
ನಗರದ ಮೆಜೆಸ್ಟಿಕ್, ರಾಜಾಜಿನಗರ, ರೇಸ್ ಕೋರ್ಸ್, ಕೋರಮಂಗಲ, ರಿಚ್ಮಂಡ್ ಸರ್ಕಲ್, ಕಬ್ಬನ್ ಪಾರ್ಕ್, ವಿಧಾನಸೌಧ, ಶಾಂತಿನಗರ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.
ಇನ್ನು ನಗರದ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಗುರುವಾರ ರಾತ್ರಿ ವೇಳೆಗೆ ಜೋರು ಮಳೆ ಸಾಧ್ಯತೆಯಿದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. ಇದೀಗ ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿದ್ದ ಜನರಿಗೆ ಕೊನೆಗೂ ಬೇಸಿಗೆ ಮಳೆ ಸುರಿದು ಒಂದಿಷ್ಟು ಹರ್ಷ ಮೂಡಿಸಿದ್ದಾನೆ.
ಹಲವು ಕಡೆ ಮೊದಲ ಮಳೆ ಆರಂಭ
ಇನ್ನು ಪೀಣ್ಯ, ಟಿ. ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಮಲ್ಲಸಂದ್ರ ಸೇರಿ ಹಲವು ಕಡೆ ಮೊದಲ ಮಳೆ ಆರಂಭವಾಗಿದ್ದು, ಮಳೆಯಿಂದಾಗಿ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಇದರ ಮಧ್ಯೆ ದಿಢೀರ್ ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದರೂ, ಹರ್ಷದಿಂದ ಕೊನೆಗೂ ಬೇಸಿಗೆ ಮಳೆ ಬಂತಲ್ಲ ಎಂಬ ಖುಷಿಯಿಂದ ಮೊದಲ ಮಳೆಯಲ್ಲೇ ನೆನೆಯುತ್ತಾ ಮನೆ ಕಡೆ ತೆರಳಿದ್ದಾರೆ.