ಬಿಸಿಲಿನಿಂದ ಸುಡುತ್ತಿದ್ದ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಂತು ಮಳೆ!
ಕೊಪ್ಪಳ/ಹಾವೇರಿ/ಬಾಗಲಕೋಟೆ/ವಿಜಯನಗರ, ಏಪ್ರಿಲ್ 9: ರಾಜ್ಯದಲ್ಲಿ ಈ ಬಾರಿಯ ಭೀಕರ ಬರಗಾಲ ಮತ್ತು ಸುಡುವ ಬಿಸಿಲಿನ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆ ಯಾವಾಗ ಬರುತ್ತೆ ಎಂದು ಜನ ಆಕಾಶದತ್ತ ಮುಖ ಮಾಡಿ ನೋಡುತ್ತಿದ್ದಾರೆ. ಆದ್ರೆ, ರಣ, ರಣ ಬಿಸಿಲಿನ ತಾಪಕ್ಕೆ ಬೆಂದಿದ್ದ ಕರ್ನಾಟಕದ ಜನತೆಗೆ ಇಂದು ಮಳೆರಾಯ ತಂಪೆರೆದಿದ್ದಾನೆ! ಹೌದು.. ಯುಗಾದಿ ಹಬ್ಬದಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ವರುಣ ತನ್ನ ಕೃಪೆ ತೋರಿಸಿದ್ದಾನೆ. ಇದರಿಂದ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನಕ್ಕೆ ಮಳೆರಾಯ ಆಗಮನದಿಂದ ಕೊಂಚ ತಂಪೆರೆದಿದ್ದಾನೆ. ಇದರಿಂದ ಜನ ಕುಣಿದು ಕುಪ್ಪಳಿಸಿದ್ದಾರೆ.
ವಿಜಯನಗರದಲ್ಲಿ ಕುಣಿದು ಕುಪ್ಪಳಿಸಿದ ಜನ
ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಕೆಲ ಕಾಲ ಜಿಟಿ, ಜಿಟಿ ಮಳೆ ಸುರಿದಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚಂಗೆಮ್ಮನ ಜಾತ್ರೆಯಿತ್ತು. ಜಾತ್ರೆ ಸಮಯದಲ್ಲಿ ಮಳೆ ಸುರಿದಿದ್ದು ಜನ ಫುಲ್ ಖುಷಿಯಾಗಿದ್ದಾರೆ. ಕಲ್ಲು ಗುಡ್ಡದಿಂದ ತುಂಬಿದ್ದ ಉಚ್ಚೆಂಗಮ್ಮ ಜಾಗದಲ್ಲಿ ವರುಣ ತಂಪೆರೆದಿದ್ದು, ಕೆಲ ಕಾಲ ಸುರಿದ ಮಳೆಯಲ್ಲಿ ಜನ ಕುಣಿದು ಕುಪ್ಪಳಿಸಿದ್ದಾರೆ.
ಕೊಪ್ಪಳದಲ್ಲಿ ಹಾರಿ ಹೋದ ತಗಡಿನ ಛಾವಣಿ!
ಇನ್ನು ಕೊಪ್ಪಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಇಂದು ಕೆಲ ಕಾಲ ಉತ್ತಮ ಮಳೆಯಾಗಿದೆ. ಯುಗಾದಿ ಹಬ್ಬದ ದಿನವೇ ವರುಣ ಕೃಪೆ ತೋರಿದ್ದು ಸಂತಸಕ್ಕೆ ಕಾರಣವಾಗಿದೆ. ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆ ಹಲವು ಗ್ರಾಮಗಳಲ್ಲಿ ಮಳೆ ಸುರಿದಿದ್ದು, ಈ ವರ್ಷ ಮಳೆ ಸಮೃದ್ಧವಾಗಲಿ, ರೈತರ ಬಾಳು ಬೆಳಗಲಿ ಎಂದು ರೈತರು ಮಳೆರಾಯನಲ್ಲಿ ಬೇಡಿಕೊಂಡಿದ್ದಾರೆ. ಇನ್ನು ಹಲಗೇರಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಮನೆಯ ತಗಡಿನ ಛಾವಣಿ ಹಾರಿ ಹೋಗಿದೆ. ಗ್ರಾಮದ ದೇವಪ್ಪ ಗುಡದಾನೂರು ಎಂಬುವವರಿಗೆ ಸೇರಿದ ಮನೆಯ ಮೇಲೆ ಹಾಕಲಾಗಿದ್ದ ತಗಡಿನ ಛಾವಣಿ ಹಾರಿ ಹೋಗಿದ್ದು, ಅದೃಷ್ಠವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಬಾಗಲಕೋಟೆಯಲ್ಲಿ ತುಂತುರು ಮಳೆ
ಇನ್ನು ಬಾಗಲಕೋಟೆಯ ವಾಂಬೆ ಕಾಲೋನಿಯಲ್ಲಿ ತುಂತುರು ಮಳೆಯಾಗಿದೆ. ಕಳೆದ 15 ನಿಮಿಷದಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು. ಬಿರು ಬಿಸಿಲಿನಿಂದ ತತ್ತರಿಸಿದ ಜನರಿಗೆ ತಂಪೆರೆದಿದ್ದಾನೆ.
ಹಾವೇರಿಯಲ್ಲೂ ತಂಪೆರೆದ ಮಳೆರಾಯ!
ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯುಗಾದಿ ಹಬ್ಬದಂದು ಹತ್ತು ನಿಮಿಷಗಳ ಕಾಲ ಮಳೆಯಾಗಿದೆ. ಬ್ಯಾಡಗಿ ಪಟ್ಟಣ ಸೇರಿದಂತೆ, ಬನ್ನಹಟ್ಟಿ, ಬಿಸಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆಲಕಾಲ ಮಳೆ ಸುರಿದಿದೆ. ಇದರಿಂದ ಸುಡು ಬಿಸಿಲಿನ ಝಳಕ್ಕೆ ತತ್ತರಿ ಹೋಗಿದ್ದ ಭೂಮಿಗೆ ತಂಪಾಗಿದೆ. ಈ ವರ್ಷದ ಭೀಕರ ಬರಗಾಲಕ್ಕೆ ತತ್ತರಿಸಿ ಹೋಗಿದ್ದ ಜನರು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.