ಬೆಂಗಳೂರು: ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಾದ ವೇತನ ಹೆಚ್ಚಳ ಹಾಗೂ ಹಿಂಬಾಕಿ ಪಾವತಿಗೆ ಸರಕಾರ ಒಪ್ಪಿಗೆ ನೀಡಿದ್ದು, 1271 ಕೋಟಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಸಂಬಂಧ ಸಚಿವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, 26 ತಿಂಗಳ ಹಿಂಬಾಕಿ ಬಿಡುಗಡೆ ವೆಚ್ಚವಾಗಿ 1,257 ಕೋಟಿ ಬಿಡುಗಡೆ ಮಾಡಲಿದೆ. ಹಿಂಬಾಕಿ ವೇತನ ಬಿಡುಗಡೆಗೆ ನೇಮಿಸಿದ್ದ ಶ್ರೀನಿವಾಸ ಮೂರ್ತಿ ನೇತೃತ್ವದ ಏಕಸದಸ್ಯ ಸಮಿತಿ ಜನವರಿ 1, 2022 ರಿಂದ 28 ಫೆಬ್ರವರಿ 2023 ರವೆರೆಗಿನ 24 ತಿಂಗಳ ಹಿಂಬಾಕಿ 718.93 ಕೋಟಿ ರು.ಗಳ ವಿಶೇಷ ಅನುದಾನವನ್ನು ಸರಕಾರ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.
38 ತಿಂಗಳ ಹಿಂಬಾಕಿಯ ಪೈಕಿ ಉಳಿದ 24 ತಿಂಗಳಲ್ಲಿ ಜನವರಿ 2021 ರಿಂದ ಡಿಸೆಂಬರ್2021 ರವರೆಗಿನ ಹಿಂಬಾಕಿ ಮೊತ್ತವಾದ 552.99 ಕೋಟಿ ರು. ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಸರಕಾರ ಒಪ್ಪಿದೆ. ಏಪ್ರಿಲ್2025 ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಲು ಕಾರ್ಮಿಕ ಸಂಘಟನೆಗಳ ಜತೆಗೆ ಚರ್ಚೆ ನಡೆಸಿ ಎಷ್ಟು ಪ್ರಮಾಣದ ವೇತನ ಹೆಚ್ಚಳ ಮಾಡಬೇಕು ಎಂದು ತೀರ್ಮಾನಿಸಲು ಸರಕಾರ ಒಪ್ಪಿಗೆ ಸೂಚಿಸಿದೆ.
2023 ರಲ್ಲಿ ವೇತನ ಪರಿಷ್ಕರಣೆ ಮಾಡಿ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡದೆ, ಸಮಿತಿಯ ನಿರ್ಧಾರದಂತೆ ವೇತನ ಹೆಚ್ಚಳ ಎಂದು ಆದೇಶಿಸಿದ್ದ ಬಿಜೆಪಿ ಸರಕಾರದ ನಿರ್ಧಾರದಿಂದ ವೇತನ ಬಾಕಿ ಪಾವತಿ ವಿಳಂಬವಾಗಿತ್ತು. ಜತೆಗೆ ನಿವೃತ್ತ ನೌಕರರ ಉಪಧನ ಬಾಕಿ 234 ಕೋಟಿ ರು. ಮೀಸಲಿಟ್ಟಿರಲಿಲ್ಲ, 2029 ರಿಂದ 2023 ರವರೆಗೆ 4900 ಕೋಟಿ ಹೊಣೆಗಾರಿಕೆ ಬಾಕಿ ಉಳಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ.
ಇದಕ್ಕಾಗಿ 2000 ಕೋಟಿ ಬ್ಯಾಂಕ್ ಸಾಲ ಪಡೆಯಲು ಸರಕಾರ ಅನುಮತಿ ನೀಡಿದ್ದು, ಅಸಲು ಮತ್ತು ಬಡ್ಡಿಯನ್ನು ಸರಕಾರವೇ ಪಾವತಿಸಲು ಅನುಮತಿ ನೀಡಿದೆ. 2019-23 ರವರೆಗಡ ಬಸ್ ಖರೀದಿ, ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಸದ ಬಿಜೆಪಿ ಆಡಳಿತದ ಕಾರಣ ಕಾಂಗ್ರೆಸ್ ಸರಕಾರ 7000 ಹೊಸ ಬಸ್ ಖರೀದಿಗೆ 3510 ಕೋಟಿ ಅನುದಾನ ನೀಡಿದ್ದಲ್ಲದೆ, 10 ಸಾವಿರ ಹೊಸ ನೇಮಕಾತಿಮಾಡಲಾಗಿದೆ ಎಂದಿದ್ದಾರೆ.
ಸಾರಿಗೆ ಸಂಸ್ಥೆಗಳು ಗಳಿಸುವ ದೈನಂದಿನ ಆದಾಯದಲ್ಲಿ ಶೇ.34.50 ರಷ್ಡು ಡೀಸೆಲ್ ವೆಚ್ಚ ಹಾಗೂ ಶೇ.46.37 ಸಿಬ್ಬಂದಿ ವೆಚ್ಚ ಸೇರಿ ಶೇ.80.87 ರಷ್ಟನ್ನು ಪಾವತಿಸಲಾಗುತ್ತಿದೆ. ಜತೆಗೆ ನಿಗಮದ ವಾಹಮಗಳ ಮೇಲಿನ ಮೋಟಾರು ವಾಹನ ತೆರಿಗೆ ಮೊತ್ತ 1219.23 ಕೋಟಿ ರು. ವಿನಾಯಿತಿ ನೀಡಲಾಗಿದೆ. ಇಷ್ಟೆಲ್ಲ ಅಂಶಗಳನ್ನು ಮನವರಿಕೆ ಮಾಡಿಕೊಂಡು ಸಿಬ್ಬಂದಿ ಮತ್ತು ಸಂಘಟನೆಗಳು ಸಹಕರಿಸುವ ಆಶಯವಿದೆ ಎಂದು ಅವರು ತಿಳಿಸಿದ್ದಾರೆ.

