ನಿವೃತ್ತ ನೌಕರರ ಬಾಕಿ ವೇತನ ವಿಚಾರದಲ್ಲಿ ಟ್ವೀಟ್: ಬಿಜೆಪಿಗೆ  ಸಚಿವ ರಾಮಲಿಂಗಾ ರೆಡ್ಡಿ ಟಾಂಗ್

Share It

ಬೆಂಗಳೂರು: ನಿವೃತ್ತ ನೌಕರರ ಬಾಕಿ ವೇತನ ಕುರಿತು ಟ್ವೀಟ್ ಮಾಡಿರುವ ಬಿಜೆಪಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸಕ್ಕತ್ ಕೌಂಟರ್ ಕೊಟ್ಟಿದ್ದಾರೆ.

ವೇತನ‌ ಪರಿಷ್ಕರಣೆ ಸಂಬಂಧ ಮೊದಲ‌ ಬಾರಿಗೆ ಮುಷ್ಕರ ಮಾಡಿದ್ದು ನಿಮ್ಮ‌ ಬಿ.ಜೆ.ಪಿ‌ ಕಾಲದಲ್ಲಿಯೇ ಎಂಬುದನ್ನು ಮರೆತು ಬಿಟ್ಟಿರಾ ?ತಮ್ಮ ಅಧಿಕಾರವಧಿಯಲ್ಲಿ ಮೊದಲ ಬಾರಿಗೆ ವೇತನಕ್ಕಾಗಿ 15 ದಿವಸಗಳ‌ ಸುದೀರ್ಘ ಮುಷ್ಕರ ನಡೆದಿದ್ದು ಮರೆತು ಬಿಟ್ಟಿರಾ? ಎಂದು ಪ್ರಶ್ನಿಸಿದ್ದಾರೆ.

ಮುಷ್ಕರದಲ್ಲಿ ಪಾಲ್ಗೊಂಡ ಸುಮಾರು 3,000 ನೌಕರರ ವಜಾ/ ಅಮಾನತು/ ವರ್ಗಾವಣೆ ಮಾಡಿ ಹಲವು ಸಿಬ್ಬಂದಿಗಳ ಮೇಲೆ FIR ಹಾಕಿಸಿ, ಇಂದಿಗೂ ಕೋರ್ಟ್/ಕಛೇರಿ ಅಂತ ಅಲೆಯುತ್ತಿದ್ದಾರೆ ಅದನ್ನು ಮರೆತು ಬಿಟ್ಟಿರಾ? ಬಿಜೆಪಿ ಅವಧಿಯಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಿ 38 ತಿಂಗಳುಗಳ ಬಾಕಿ ಹಣ ಪಾವತಿ ಮಾಡದೇ, ಅದಕ್ಕಾಗಿ ಯಾವುದೇ ಹಣ ಮೀಸಲಿರಿಸದೆ ಸಾರಿಗೆ ನೌಕರರನ್ನು ಬೀದಿಗೆ ತಂದು ಅವರು ಮುಷ್ಕರವನ್ನು ಮಾಡುವ ಹಂತಕ್ಕೆ ತಂದಿರುವ ತಮ್ಮ ಬಿ.ಜೆ.ಪಿ ಯ ಆಡಳಿತ ಅದನ್ನು ಮರೆತು ಬಿಟ್ಟಿರಾ? ಎಂದು ನೆನಪಿಸಿದ್ದಾರೆ.

2023 ರಲ್ಲಿ ವೇತನ‌ ಹೆಚ್ಚಳ‌ ಮಾಡಿ ನಿವೃತ್ತಿ ಹೊಂದಿದ ನೌಕರರಿಗೆ ಬಾಕಿ ನೀಡದೆ ಹೋಗಿದ್ದು ತಾವು ಎಂಬುದನ್ನು ಮರೆತು ಬಿಟ್ಟಿರಾ ? ನಿವೃತ್ತ ನೌಕರರಿಗೆ ನೀವು ಪಾವತಿ‌ ಮಾಡದೇ ಹೋಗಿದ್ದ ರೂ.224 ಕೋಟಿ ಹಣವನ್ನು ನಾವು ನಿವೃತ್ತ ನೌಕರರಿಗೆ ಪಾವತಿ ಮಾಡಿದ್ದೇವೆ. ಯಾವ ಮುಖ‌ ಇಟ್ಟುಕೊಂಡು ನಿವೃತ್ತಿ ‌ಹೊಂದಿದ ನೌಕರರ ಬಗ್ಗೆ ಟ್ಟೀಟ್ ಮಾಡುತ್ತೀರಾ ? ಎಂದಿದ್ದಾರೆ.

ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಬೆಳೆಸುವ ಯಾವುದೇ ಒಂದೇ ಒಂದು ಉಪಕ್ರಮ‌ ತಿಳಿಸಿ‌ ನೋಡೋಣ ? ಶೂನ್ಯ ನೇಮಕಾತಿ, ಹೊಸ ಬಸ್ಸುಗಳ ಸೇರ್ಪಡೆ ಇಲ್ಲ,  ಡಕೋಟಾ‌ ಬಸ್ಸುಗಳು‌, ನೌಕರರಿಗೆ  ಅರ್ಧ ವೇತನ/ ಕೆಲವೊಮ್ಮೆ ಈ‌ ತಿಂಗಳ ವೇತನ‌ ಮುಂದಿನ ತಿಂಗಳು, ಹೀಗೆ ಹತ್ತು ಹಲವು ತಮ್ಮ ದುರಾಡಳಿತದ ಉದಾಹರಣೆಗಳು ಎಂದಿದ್ದಾರೆ.

ನಮ್ಮ ಕಾಲದಲ್ಲಿ ಬರೋಬ್ಬರಿ 10000 ನೇಮಕಾತಿ, 7800 ಹೊಸ ಬಸ್ಸುಗಳು, ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿನಂದು ಪೂರ್ತಿ ಸಂಬಳ ಪಾವತಿ, ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ‌ ಪ್ರಯತ್ನ ನಮ್ಮದಾಗಿದೆ. ಆದರೆ, ತಾವು ಅಧಿಕಾರದಲ್ಲಿದ್ದಾಗ  ಸಾರಿಗೆ ನೌಕರರ ಬಗ್ಗೆ ಕಾಳಜಿವಹಿಸದೆ ಈಗ ಟ್ವೀಟ್ ಮೂಲಕ ಕಾಳಜಿವಹಿಸುವ ನಾಟಕ ಆಡಲು ತಮಗೆ ನಾಚಿಕೆಯಾಗುವುದಿಲ್ಲವೇ? ಎಂದು ಗುಡುಗಿದ್ದಾರೆ.


Share It

You May Have Missed

You cannot copy content of this page