ನಾಲ್ಕು ದಶಕಗಳ ನಂತರ ಜೀವಂತಗೊಂಡ ರಾಮನಗುಡ್ಡ ಕೆರೆ; 900 ಎಕರೆ ಕೃಷಿಭೂಮಿಗೆ ನೀರಾವರಿ ಭಾಗ್ಯ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನಲ್ಲಿ ನಾಲ್ಕು ದಶಕಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಮನಗುಡ್ಡ ಕೆರೆಗೆ ಮತ್ತೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಈ ಮಹತ್ವದ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮಗಳ ಸುಮಾರು 900 ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಲಭಿಸಲಿದ್ದು, ರೈತರಿಗೆ ಹೊಸ ಆಶಾಕಿರಣ ಮೂಡಿಸಿದೆ.
ರಾಮನಗುಡ್ಡ ಕೆರೆ ಸುಮಾರು 40 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದರೂ, ನೀರಿನ ಕೊರತೆಯಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಜ.16ರಂದು ಅಧಿಕೃತವಾಗಿ ನೀರು ಹರಿಸುವುದಾಗಿ ಹನೂರು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದ್ದಾರೆ.
ಎರಡುವರೆ ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಕಾಮಗಾರಿ ಪೂರ್ಣ ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ 1.45 ಕಿಲೋಮೀಟರ್ ಉದ್ದದ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಬೂದುಬಾಳು ಪೈಪ್ಲೈನ್ ಡೆಲಿವರಿ ಚೇಂಬರ್ನಿಂದ ಕೆರೆಗೆ ನೀರು ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಚೇಂಬರ್ ನಿರ್ಮಾಣವೂ ಮುಗಿದಿದೆ. ಇದರ ಪರಿಣಾಮವಾಗಿ ಚಿಂಚೋಳಿ, ರಾಯರ ದೊಡ್ಡಿ ಮತ್ತು ಎಡರಳ್ಳಿ ದೊಡ್ಡಿ ಭಾಗಗಳ 900 ಎಕರೆ ಜಮೀನಿಗೆ ನೀರಾವರಿ ಅನುಕೂಲ ಸಿಗಲಿದೆ.
ಈ ಯೋಜನೆಯಿಂದ ಬರಡು ಭೂಮಿಗೆ ಜೀವ ತುಂಬಿದಂತಾಗಿದೆ ಎಂದು ರೈತ ಮುಖಂಡ ವಿನೇಶ್ ಅಭಿಪ್ರಾಯಪಟ್ಟಿದ್ದಾರೆ. ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಈಗ ಸಾಕಾರಗೊಂಡಿರುವುದು ಸಂತಸದ ವಿಷಯ ಎಂದರು. ಜತೆಗೆ, ಇತರ ಕೆರೆಗಳಿಗೂ ಇಂತಹ ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ರೈತ ಮುಖಂಡ ಅಮೋಘ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜ.16ರಂದು ಕೆರೆಗೆ ನೀರು ಹರಿಸುವ ದಿನಾಂಕ ನಿಗದಿ
ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಕಾವೇರಿ ನದಿಯಿಂದ ಪೈಪ್ಲೈನ್ ಮೂಲಕ ನೀರು ತರಿಸುವ ಯೋಜನೆ ಜಾರಿಯಲ್ಲಿದೆ. ಜ.16ರಂದು ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮ ನಿಗದಿಯಾಗಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಎಂ.ಆರ್. ಮಂಜುನಾಥ್ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ತಾಲೂಕಿನ ಇತರೆ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲು ನೀಲ ನಕ್ಷೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.


