ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಮಾಸ್ಟರ್ ಮೈಂಡ್ ನಿವೃತ್ತ ಯೋಧನ ಪುತ್ರ!

Oplus_131072

Oplus_131072

Share It

ಶಿವಮೊಗ್ಗ : ಮಂಗಳೂರು ಗೋಡೆ ಬರಹ, ಬೆಂಗಳೂರಿನ ವೈಟ್​​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ತುಂಗಾ ನದಿ ಟ್ರಯಲ್ ಬಾಂಬ್ ಸ್ಫೋಟದ ಮಾಸ್ಟರ್​​ ಮೈಂಡ್, ಬಂಧಿತ​ ಉಗ್ರ ಅಬ್ದುಲ್ ಮತೀನ್ ತಾಹಾ ನಿವೃತ್ತ ಯೋಧನ ಪುತ್ರನಾಗಿದ್ದಾನೆ.

ಉಗ್ರ ಮತೀನ್​ ತಂದೆ, ನಿವೃತ್ತ ಯೋಧ ಮನ್ಸೂರ್ ಅವರು ದೇಶಕ್ಕಾಗಿ ಸೇವೆ ಸಲ್ಲಿಸಿದರೇ, ಮಗ ಉಗ್ರ ಮತೀನ್ ತಾಹಾ ದೇಶದ್ರೋಹ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿದ್ದ ಅಬ್ದುಲ್ ಮತೀನ್ ತಾಹಾ, ಇಂಜಿನಿಯರಿಂಗ್ ಅನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾನೆ. ಅಬ್ದುಲ್ ಮತೀನ್ ತಾಹಾ ಬೆಂಗಳೂರಿನಲ್ಲಿ ‌ಐಸಿಸ್ ಉಗ್ರರ ಜೊತೆ ನಂಟು ಬೆಳೆಸಿಕೊಂಡಿದ್ದಾನೆ. ಅಲ್ಲದೆ ತೀರ್ಥಹಳ್ಳಿಯ ತನ್ನ ಕೆಲವು ಸ್ನೇಹಿತರನ್ನು ಉಗ್ರ ಸಂಘಟನೆಗೆ ‌ಬಳಸಿಕೊಂಡಿದ್ದಾನೆ.

ಉಗ್ರ ಅಬ್ದುಲ್ ಮತೀನ್ ತಾಹಾ ಕಳೆದ 4-5 ವರ್ಷದಿಂದ ನಾಪತ್ತೆಯಾಗಿದ್ದನು. ಉಗ್ರ ಸಂಘಟನೆ ಜೊತೆ ಸೇರಿಕೊಂಡ ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸ್ಥಳೀಯ ಪೊಲೀಸರು, ಆತನಿಗಾಗಿ ಹುಡುಕಾಡಲು ಆರಂಭಿಸಿದ್ದಾರೆ. ಅಬ್ದುಲ್ ಮತೀನ್ ತಾಹಾ ಮನೆಗೆ ತರೆಳಿ ಆತನ ಬಗ್ಗೆ ವಿಚಾರಿಸಿದ್ದಾರೆ.

ಅಬ್ದುಲ್ ಮತೀನ್ ತಾಹಾ ತೀರ್ಥಹಳ್ಳಿಯ ಶಾರೀಖ್, ಮುಸಾವೀರ್ ಹುಸೇನ್ ಸಹಾಯದೊಂದಿಗೆ ‌ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಅಲ್ಲದೆ ತೀರ್ಥಹಳ್ಳಿಯ ಯುವಕರನ್ನು ಉಗ್ರ ಚಟುವಟಿಕೆಗೆ ಬೆಳಸಿಕೊಂಡಿದ್ದನು. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆ ಆಪರೇಟ್ ಮಾಡುತ್ತಿದ್ದನು.

ಅಬ್ದುಲ್ ಮತೀನ್ ತಾಹಾ ತಂದೆ ನಿವೃತ್ತ ಯೋಧ
ಉಗ್ರ ಅಬ್ದುಲ್ ಮತೀನ್ ತಾಹಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆಯ ನಿವಾಸಿಯಾಗಿದ್ದಾನೆ. ಉಗ್ರ ಅಬ್ದುಲ್ ಮತೀನ್ ತಾಹಾ ತಂದೆ ಮನ್ಸೂರ್​ ‌22 ವರ್ಷಕ್ಕೂ ಹೆಚ್ಚು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತನ್ನ ಪುತ್ರ ಅಬ್ದುಲ್ ಮತೀನ್ ತಾಹಾ ಉಗ್ರ ಎನ್ನುವ ಸುದ್ದಿ ತಿಳಿದು ತಂದೆ ಮನ್ಸೂರ್ ಆಘಾತಕ್ಕೆ ಒಳಗಾಗಿದ್ದರು. ಒಬ್ಬ ಯೋಧನ ಮಗ ಉಗ್ರನಾದ ಬಗ್ಗೆ ನೋವು ಪಟ್ಟಿದ್ದರು. ನನ್ನ ‌ಮಗ‌ ಉಗ್ರ ಅಂತ ಸಾಬೀತಾದರೆ ಗಲ್ಲಿಗೇರಿಸಿ ಅಂತ ತಂದೆ ಮನ್ಸೂರ್ ಹೇಳಿದ್ದರು. ನಿವೃತ್ತ ಯೋಧ ಮನ್ಸೂರ್​ ಕಳೆದ ವರ್ಷ ಅನಾರೋಗ್ಯದ ಹಿನ್ನೆಲೆಯಲ್ಲಿ ‌ಮೃತಪಟ್ಟರು.

ತಂದೆ ಮೃತಪಟ್ಟರೂ ಸುಳಿಯದ ಮತೀನ್​
ತಂದೆ ಮೃತಪಟ್ಟಾಗಲಾದರೂ ಊರಿಗೆ ಬರಬಹುದು ಎಂದು ಪೊಲೀಸರು ಕಾದು ಕುಳಿತಿದ್ದರು. ಆದರೆ ಉಗ್ರ ಮತೀನ್​ ಬರಲೇ ಇಲ್ಲ. ಇದೀಗ ರಾಮೇಶ್ವರಂ ಕೆಫೆ ಬಾಂಬ ಸ್ಫೋಟ ಪ್ರಕರಣದಲ್ಲಿ ಎನ್​ಐಎ ಅಧಿಕಾರಿಗಳು ಕೊಲ್ಕತ್ತಾದಲ್ಲಿ ಉಗ್ರ ಅಬ್ದುಲ್ ಮತೀನ್ ತಾಹಾನನ್ನು ಬಂಧಿಸಿದ್ದಾರೆ.

ಇನ್ನು ಅಬ್ದುಲ್ ಮತೀನ್ ತಾಹಾ ಜೊತೆಗೆ ಇನ್ನು ಹಲವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅಬ್ದುಲ್ ಮತೀನ್ ತಾಹಾ ಹಾಗೂ ಬಾಂಬರ್​ ಮುಸಾವೀರ್ ಹುಸೇನ್​​ನನ್ನು ಎನ್​ಐಎ ತೀರ್ಥಹಳ್ಳಿಗೆ ಕರೆತರುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಹಲವರನ್ನು ವಿಚಾರಣೆಗೆ‌ ಒಳಪಡಿಸುವ ಸಂಭವವೂ ಇದೆ.


Share It

You cannot copy content of this page