ಮಾಗಡಿ: ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಪಣ ತೊಟ್ಟಿರುವ ಸರ್ಕಾರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಶುಕ್ರವಾರ ಮಾಗಡಿ ತಾಲ್ಲೂಕಿನ ಮತ್ತೀಕೆರೆ ಗ್ರಾಮದಲ್ಲಿ ಅಗಲಕೋಟೆ ವಿವಿಧೊದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಮತ್ತು ಮತ್ತಿಕೆರೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡವನ್ನು ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ರೈತರ ಅಭ್ಯುದಯಕ್ಕೆ ಸಹಕಾರಿಯಾಗಲಿರುವ ವಿವಿಧ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಮುಂಬರುವ ದಿನಗಳಲ್ಲಿ ಈ ಕಟ್ಟಡಗಳ ನಿರ್ಮಾಣದಿಂದ ರೈತರಿಗೆ ಉತ್ತಮ ರೀತಿಯ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬಹುದು, ಅದು ಜಿಲ್ಲಾ ಮಟ್ಟದ ತರಬೇತಿ ಕೇಂದ್ರವಾಗಿದೆ ಎಂದು ಹೇಳಿದರು.
ಬರ ಪರಿಹಾರ ಮೊತ್ತಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿತ್ತು, ಆದರೆ ಯಾವುದಕ್ಕೂ ಸ್ಪಂದಿಸದೇ ಇದ್ದಾಗ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅಲ್ಲಿ ಜಯಪಡೆದ ನಂತರ ಕೇಂದ್ರದಿಂದ ಮೂರು ಸಾವಿರಕ್ಕೂ ಹೆಚ್ಚು ಕೋಟಿ ರೂ.ಗಳು ಬಿಡುಗಡೆಯಾದವು. ಅದನ್ನು ರಾಜ್ಯದ ರೈತರಿಗೆ ವಿತರಿಸಲಾಗಿದೆ. ರೈತರಿಗೆ ಬೆಳೆ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಿದೇ ಎಂದರು.
ರಾಜ್ಯದ ಪ್ರತೀ ಕ್ಷೇತ್ರದಲ್ಲೂ ಸಹ ಅಭಿವೃಧ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಹಲವರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಅಲ್ಲಿ ಈ ಯೋಜನೆಗಳ ಅನುಷ್ಠಾನದ ವಿರೋಧಕ್ಕೆ ಯಾವುದೇ ಮನ್ನಣೆ ದೊರೆಯಲಿಲ್ಲ, ಸರ್ಕಾರದ ಪಂಚ ಗ್ಯಾರಂಟಿ ಜನರನ್ನು ತಲುಪುತ್ತಿವೆ ಎಂದರು.
ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ದೇಶದಲ್ಲಿ ಮೊಟ್ಟಮೊದಲು ರಾಜ್ಯದಲ್ಲಿ ಸಹಕಾರಿ ಸಂಘಗಳು ಪ್ರಾರಂಭಗೊಂಡವು. ಮಾತ್ರವಲ್ಲ ಅವು ಯಶಸ್ವಿಯಾಗಿವೆ. ಸಹಕಾರಿ ಸಂಘಗಳು ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೊಂಡಿರುವಷ್ಟು ಬೇರೆ ರಾಜ್ಯಗಳಲ್ಲಿ ಅಭಿವೃಧ್ಧಿಗೊಂಡಿಲ್ಲ, ಮಾಗಡಿ ತಾಲೂಕಿನಲ್ಲಿ ಡಿಸಿಸಿ ಬ್ಯಾಂಕ್ ಮೂಲಕ 171 ಕೋಟಿ ರೂ.ಗಳ ಸಾಲ ಸೌಲಭ್ಯ ನೀಡಲಾಗಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ ಎಂದರು.
ಕೃಷಿ ಫಸಲನ್ನು ಹೆಚ್ಚಿಸಿದ ಹಸಿರು ಕ್ರಾಂತಿ ನಮ್ಮ ಸರ್ಕಾರದ ಫಲ, ರೈತರಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ನಮ್ಮ ಸರ್ಕಾರ, ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ವಿವಿಧ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ರೈತರಿಗೆ ಉತ್ತೇಜನ ನೀಡುತ್ತಿದೆ, ಅವರಿಗೆ ಉತ್ತೇಜನ ನೀಡದಿದ್ದರೆ ಆಹಾರ ಉತ್ಪಾದನೆಯಲ್ಲಿ ಕುಂಠಿತವಾಗುತ್ತದೆ, ನಮಗೆ ಆಹಾರ ಭದ್ರತೆ ನೀಡುವವರು ರೈತರು, ಹೇಮಾವತಿ ಉಳಿದ ನೀರನ್ನು ಎಕ್ಸ್ಪ್ರೆಸ್ ವೇ ಮೂಲಕ ತಂದು ಈ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ, ಮಾಗಡಿ ಭಾಗದಲ್ಲಿ ರೈತರು ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ. ಕೆರೆಯಲ್ಲಿ ನೀರು ತುಂಬಿಸಿದರೆ ರೈತರ ವ್ಯವಸಾಯಕ್ಕೆ ಇನ್ನಷ್ಟು ಅನುಕೂಲವಾಗುತ್ತದೆ ಹಾಗೂ ಕುಡಿಯುವ ನೀರಿಗೂ ಸಹ ಸಹಕಾರಿಯಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ವೇದಿಕೆಯಲ್ಲಿದ್ದರು.
