ಬೆಂಗಳೂರು: ಸಹನಟಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ನಟ ಮಡೆನೂರು ಮನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಾಲ್ಕು ದಿನಗಳಿಂದ ಪೊಲೀಸ್ ವಿಚಾರಣೆಯಲ್ಲಿದ್ದ ಮನು ಅವರನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮನು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ನ್ಯಾಯಾಲಯದ ಆದೇಶದ ಅನ್ವಯ ಇದೀಗ ಮಡೆನೂರು ಮನು ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಿದ್ದಾರೆ. ಸಹನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮನು ಮೇಲಿದೆ. ಈ ನಿಟ್ಟಿನಲ್ಲಿ ಪೊಲೀಸರು, ನಟಿ ಹಾಗೂ ಮನು ಅವರನ್ನು ಈಗಾಗಲೇ ವಿಚಾರಣೆ ನಡೆಸಿ, ಅನೇಕ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.
ಇವರಿಬ್ಬರ ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ವಾಟ್ಸಾಪ್ ಚಾಟ್ಸ್, ಕಾಲ್ ರೆಕಾರ್ಡ್ ಸೇರಿದಂತೆ ವಿವಿಧ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ. ಜತೆಗೆ, ಕೆಲವು ಸಾಕ್ಷಿಗಳ ವಿಚಾರಣೆಯನ್ನು ನಡೆಸಿದ್ದಾರೆ.