ಬೆಂಗಳೂರು: 63 ವರ್ಷದ ರೋಗಿಯೊಬ್ಬರಿಗೆ ತೀವ್ರವಾಗಿ ತೊಂದರೆ ಉಂಟುಮಾಡಿದ್ದ ಹರ್ನಿಯಾ ಸಮಸ್ಯೆಗೆ ರಾಮಕೃಷ್ಣ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆತು ನೆಮ್ಮದಿಯಿಂದ ಮನೆಗೆ ಮರಳುವಂತಾಗಿದೆ.
ಸುಮಾರು 10 ವರ್ಷಗಳಿಂದ ಈ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ವಿಪರೀತ ನೋವಿನಿಂದ ಬಳಲುತ್ತಿದ್ದ ರೋಗಿಗೆ ಕೊನೆಗೆ ನೋವಿನಿಂದ ಮುಕ್ತಿ ಸಿಕ್ಕಿದ್ದು, ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಹರ್ನಿಯಾವೆನ್ನುವುದು ಮೇಲ್ನೋಟಕ್ಕೆ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಊತದಂತೆ ಕಾಣುವ, ಹೊರಚಾಚಿರುವ ಮಾಂಸಖಂಡಗಳು. ಇದು ಕರುಳಿನ ಭಾಗದಲ್ಲಿ ಕಂಡುಬರುವ ಸಮಸ್ಯೆಯಾಗಿದ್ದು, ಗಡ್ಡೆಯಂತೆ ಹೊಟ್ಟೆಯ ಹೊರಭಾಗದಲ್ಲಿ ಚಾಚಿದಂತೆ ಕಾಣುತ್ತದೆ. ಸಮಸ್ಯೆ ತೀವ್ರಗೊಂಡರೆ ಹೊಟ್ಟೆಯ ಬಹತೇಕ ಭಾಗವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಇರುವವರಲ್ಲಿ ಪದೇ ಪದೇ ನೋವು, ಉರಿಯೂತ ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದರೆ ತೀವ್ರ ಅನಾರೋಗ್ಯ ಪರಿಣಾಮಗಳನ್ನು ಎದುರಿಸಬೇಕಾದದ್ದು ಖಚಿತ.
ಬೊಜ್ಜಿನ ಸಮಸ್ಯೆ, ಆಸ್ತಮಾ, ರಕ್ತದ ಒತ್ತಡ ಹಾಗೂ ಮಧುಮೇಹದಂಥ ಆರೋಗ್ಯ ಸಮಸ್ಯೆಗಳು ಇದ್ದ 63 ವರ್ಷದ ಮಹಿಳಾ ರೋಗಿಯೊಬ್ಬರಿಗೆ ತೀವ್ರತರದ ಹರ್ನಿಯಾ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಹೊಟ್ಟೆಯ ಉಬ್ಬರ, ವಾಂತಿಯಂಥ ಲಕ್ಷಣಗಳು ಕಾಣಿಸಿಕೊಂಡು ಕೂಡಲೇ ರಾಮಕೃಷ್ಣ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆ ನೀಡಿತು.
ಈ ಬಗ್ಗೆ ಮಾತನಾಡಿದ ಲ್ಯಾಪ್ರೊಸ್ಕಪಿಕ್ ಸರ್ಜನ್ ಡಾ. ರಾಜೀವ್ ಪ್ರೇಮನಾಥ್ , ‘ ಈ ರೋಗಿಯ ಪ್ರಕರಣದಲ್ಲಿ ಹರ್ನಿಯಾವು ಹೊಟ್ಟೆಯ ಶೇ 40ರಷ್ಟು ಭಾಗವನ್ನು ಆಕ್ರಮಿಸಿಕೊಂಡಿತ್ತು. ಹಾಗಾಗಿ ರೋಗಿಗೆ ಹೊಟ್ಟೆಯ ಭಾಗದಲ್ಲಿ ವಿಪರೀತ ತೊಂದರೆ ಉಂಟಾಗುತ್ತಿತ್ತು. ಈ ಹರ್ನಿಯಾದ ಮಾಂಸಖಂಡಗಳು ಸುಮಾರು 10ಸೆಂಟಿ ಮೀಟರ್ನಷ್ಟು ಉದ್ದವಿತ್ತು. ರೋಗಿಗೆ ಸುಮಾರು 10 ವರ್ಷಗಳಿಂದ ಈ ಸಮಸ್ಯೆ ಇತ್ತು. ಆದರೆ ಈ ಹೊರಚಾಚುವಿಕೆಯ ಪ್ರಮಾಣ ಕ್ರಮೇಣ ದೊಡ್ಡದಾಗಿದೆ. ಹಾಗಾಗಿ ರೋಗಿಯು ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕಾಯಿತು’ ಎಂದು ಹೇಳಿದ್ದಾರೆ.
‘ವ್ಯಕ್ತಿಯಲ್ಲಿ ಹರ್ನಿಯಾ ಮಾಂಸಖಂಡಗಳು ಸಹಜವಾಗಿಯೇ ಇರುತ್ತವೆ. ಆದರೆ ಅವು ದೊಡ್ಡದಾಗುತ್ತ ಹೊರಚಾಚಿದಂತೆ ಕಂಡಷ್ಟೂ ಇತರೆ ಅಂಗಾಂಗಗಳ ಸ್ಥಳವನ್ನು ಆಕ್ರಮಿಸುತ್ತದೆ. ಇದರಿಂದ ಇತರೆ ಅಂಗಾಂಗಗಳ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜತೆಗೆ ವ್ಯಕ್ತಿಗೆ ಸಹಜವಾಗಿ ಇರಲು ಸಾಧ್ಯವಾಗುವುದಿಲ್ಲ. ರೋಗಿಗೆ ಶ್ವಾಸಕೋಶದ ಮೇಲೆ ಒತ್ತಡ ಬಿದ್ದು, ಸಮರ್ಪಕವಾಗಿ ಉಸಿರಾಟ ನಡೆಸಲು ಸಾಧ್ಯವಾಗದೇ ಹೋಗಬಹುದು. ಈ ರೋಗಿಯ ಪ್ರಕರಣದಲ್ಲಿಯೂ ಇಂಥದ್ದೇ ಸವಾಲುಗಳಿದ್ದರಿಂದ ಆಸ್ಪತ್ರೆಯಲ್ಲಿಯೇ ಇದ್ದ ಶ್ವಾಸಕೋಶತಜ್ಞರನ್ನು ಸಂಪರ್ಕಿಸಿ, ಅವರ ಶಿಫಾರಸ್ಸಿನ ಮೇರೆಗೆ ಚಿಕಿತ್ಸೆ ನೀಡಲಾಯಿತು’ ಎಂದು ನೆನಪಿಸಿಕೊಂಡರು ರಾಜೀವ್ ಪ್ರೇಮನಾಥ್.
ಹೊಟ್ಟೆಯ ಭಾಗದಲ್ಲಿ ಕುಳಿ ಉಂಟಾಗಿರುವುದರಿಂದ ಹರ್ನಿಯಾ ಅಂಶಗಳು ಕಡಿಮೆಯಾಗುವಂತೆ ಚಿಕಿತ್ಸೆ ನೀಡಲಾಗಿದೆ. ಈಗ ಚಿಕಿತ್ಸೆ ನೀಡಿದ್ದರೂ ಪೂರ್ಣವಾಗಿ ಗುಣಮುಖಗೊಳ್ಳಲು ಹಲವು ವಾರಗಳೇ ಬೇಕಾಗುತ್ತವೆ. ಹರ್ನಿಯಾದ ತೀವ್ರತೆ ಹಾಗೂ ಹೊಟ್ಟೆಯಲ್ಲಿ ಉಂಟಾದ ಕುಳಿಯ ಆಧಾರದ ಮೇಲೆ ರೋಗಿಯು ಚೇತರಿಸಿಕೊಳ್ಳುವ ಮಟ್ಟವನ್ನು ನಿರ್ಧರಿಸಬಹುದು ಎಂದು ಅವರು ಹೇಳಿದರು.
ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹಲವು ತಜ್ಞ ವೈದ್ಯರ ನೆರವನ್ನು ಪಡೆಯಬೇಕಾಯಿತು. ಬೊಜ್ಜಿನ ಕಾರಣಗಳಿಂದ ಅತಿಯಾಗಿ ಚರ್ಮ ಇಳಿಬಿಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಜತಗೆ ಆಸ್ತಮಾ ಇದ್ದಿದ್ದರಿಂದ ಸೂಕ್ತ ಅರವಳಿಕೆತಜ್ಞರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆ ಪೂರ್ಣಗೊಂಡ ನಂತರ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ಪದೇ ಪದೇ ಚಿಕಿತ್ಸಾ ವಿಧಾನವನ್ನು ಕೂಲಕಂಷವಾಗಿ ಗಮನಿಸಿ, ರೋಗಿಯ ಚೇತರಿಕೆಯ ಮಟ್ಟವನ್ನು ಅಳೆಯಲಾಯಿತು.
ಮಧುಮೇಹ, ರಕ್ತದೊತ್ತಡ ಹಾಗೂ ಆಸ್ತಮಾ ಸಮಸ್ಯೆಗಳಿದ್ದರಿಂದ ರೋಗಿಯ ಉಸಿರಾಟ ಕ್ರಮದ ಬಗ್ಗೆ ನಿಗಾ ವಹಿಸಲಾಯಿತು. ಕ್ರಮೇಣ ರೋಗಿಯು ಚಿಕಿತ್ಸೆಗೆ ಸಮರ್ಪಕವಾಗಿ ಸ್ಪಂದಿಸಿದರು. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಸಂಪೂರ್ಣ ಚಿಕಿತ್ಸೆ ಪಡೆದು ಮರಳಿದರು ಎಂದು ಮಾಹಿತಿ ನೀಡಿದರು.
ಈ ಬಗ್ಗೆ ರೋಗಿ ಹೇಳುವುದಿಷ್ಟು: ‘ ರಾಮಕೃಷ್ಣ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕಿದೆ. ತಜ್ಞ ವೈದ್ಯರಿದ್ದ ಈ ಆಸ್ಪತ್ರೆಯಲ್ಲಿ ನನ್ನ ಹಲವು ವರ್ಷಗಳ ನೋವಿಗೆ ವಿದಾಯ ಹೇಳುವಂತೆ ಆಯಿತು. ಈಗ ಸರಾಗವಾಗಿ ನಡೆಯಬಲ್ಲೆ. ಉಸಿರಾಟದಲ್ಲಿಯೂ ಸಮಸ್ಯೆಯಾಗುತ್ತಿಲ್ಲ. ನೋವಿಲ್ಲದೇ ಜೀವನ ನಡೆಸುತ್ತಿರುವುದಕ್ಕೆ ರಾಮಕೃಷ್ಣ ಆಸ್ಪತ್ರೆಯ ಎಲ್ಲ ತಜ್ಞವೈದ್ಯರಿಗೆ ವಂದನೆ ಹೇಳಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.