ಬೆಳಗಾವಿ: ಮಚ್ಚೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಅಪರಿಚಿತರು ಮಸಿ ಹಚ್ಚಿರುವ ಕುರಿತು ದೂರು ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಮೊದಲಿದ್ದ ರಾಯಣ್ಣ ಮೂರ್ತಿ ಕಪ್ಪು ಬಣ್ಣವೇ ಇತ್ತು. ಅದರ ಮೇಲೆ ಮತ್ತೆ ಕರಿಮಸಿ ಸುರಿದಿದ್ದಾರೆ. ಕೆಲವು ಕಾಲ ಇದನ್ನು ಯಾರು ಗಮನಿಸಿರಲಿಲ್ಲ. ಆದರೆ ರಾತ್ರಿ ಇದು ಕೆಲ ಯುವಕರ ಗಮನಕ್ಕೆ ಬಂದಿದೆ. ತಕ್ಷಣ ಯುವಕರು ಸ್ಥಳದಲ್ಲಿ ಸೇರಿ ಘೋಷಣೆ ಕೂಗಿದರು.
ದೂರು ಸ್ವೀಕರಿಸಿದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿಮೆಯ ಮೇಲಿದ್ದ ಮಸಿಯ ಮಾದರಿಯನ್ನು ಸಂಗ್ರಹಿಸಿ ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳದ ಸಮೀಪದಲ್ಲೇ ಸುಮಾರು 10 ಮೀಟರ್ ದೂರದಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಅದರ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ದೂರುದಾರರನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

