ವಡೋದರ: ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಕನ್ಮಡಿಗರ ಕಣ್ಮಣಿಯಾಗಿದೆ.
2024 ರಲ್ಲಿ ಮೊದಲ ಬಾರಿಗೆ WPL ಚಾಂಪಿಯನ್ ಆಗುವ ಮೂಲಕ RCB ಅಭಿಮಾನಿಗಳ18 ವರ್ಷದ ಕನಸನ್ನು ಮಹಿಳಾ ತಂಡ ನನಸು ಮಾಡಿತ್ತು. ಅನಂತರ ಪುರುಷರ ತಂಡವೂ ಮೊದಲ ಬಾರಿಗೆ 2025 ರಲ್ಲಿ ಚಾಂಪಿಯನ್ ಆಗಿತ್ತು. ಆ ನೆನಪಿನ ನಡುವೆಯೇ 2026 ರ WPL ಕಿರೀಟವನ್ನು RCB ಮಹಿಳಾ ತಂಡ ಮುಡಿಗೇರಿಸಿಕೊಂಡಿದೆ.

ಸತತ ಐದು ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸುತ್ತಲೇ ಈ ವರ್ಷದ ಅಭಿಯಾನ ಆರಂಭಿಸಿದ RCB ಟಾಪ್ 1 ತಂಡವಾಗಿ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ಕೂಡ ತನ್ನ ಖ್ಯಾತಿಗೆ ತಕ್ಕ ಆಡಿ, ದಾಖಲೆಯ 204 ರನ್ ಗಳನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ. ಆ ಮೂಲಕ ಅಷ್ಟು ಬೃಹತ್ ಮೊತ್ತವನ್ನು ಬೆನ್ನತ್ತಿ ಗೆಲುವು ಸಾಧಿಸಿದ ಏಕೈಕ ತಂಡ ಎನಿಸಿಕೊಂಡಿದೆ. ಹಿಂದೆಯೂ 202 ರನ್ ಗಳಿಸಿ ಗೆಲುವು ಸಾಧಿಸಿದ್ದು RCB ಸಾಧನೆಯಾಗಿದೆ.
ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ 4 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತ್ತು. ಡೆಲ್ಲಿ ಪರ ನಾಯಕಿ ಜೆಮಿಮಾ 57 ರನ್ ಗಳಿಸಿ ಗಮನ ಸೆಳೆದರು. ಬೃಹತ್ ಮೊತ್ತ ಬೆನ್ನತ್ತಿದ್ದ RCB ಮೊದಲ ವಿಕೆಟ್ ಬೇಗನೆ ಕಳೆದುಕೊಂಡರೂ, ನಂತರ ಜತೆಯಾದ ಸ್ಮೃತಿ ಮಂದನಾ ಮತ್ತು ಜಾರ್ಜಿಯಾ ವಾಲ್ ತಂಡವನ್ನು ಸುಲಭವಾಗಿ ಗೆಲ್ಲಿಸಿದರು.

ಸ್ಮೃತಿ ಮಂದನಾ ಭರ್ಜರಿ 87 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರೆ, ಜಾರ್ಜಿಯಾ ವಾಲ್ 79 ರನ್ ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂತಿಮವಾಗಿ ಗೆಲುವಿಗೆ ಬೇಕಾಗಿದ್ದ ಶಾಸ್ತ್ರವನ್ನು ರಾಧಾ ಯಾದವ್ ಮತ್ತು ಕ್ಲಾರ್ಕ್ ಮುಗಿಸಿದರು. ಎರಡು ಎಸೆತ ಬಾಕಿಯಿರುವಾಗ ಭರ್ಜರಿ ಬೌಂಡರಿ ಮೂಲಕ RCB ಗೆ ಜಯ ತಂದುಕೊಟ್ಟರು.

