ವಾರಣಾಸಿ: ಮದುವೆ ಊಟದಲ್ಲಿ ತನಗೆ ಎಕ್ಸ್ಟ್ರಾ ಪನೀರ್ ಕೊಡಲು ನಿರಾಕರಣೆ ಮಾಡಿದರು ಎಂಬ ಕಾರಣಕ್ಕೆ ಮದುವೆಗೆ ಬಂದಿದ್ದ ಅತಿಥಿಯೊಬ್ಬ, ಮಂಟಪಕ್ಕೆ ಮಿನಿ ನುಗ್ಗಿಸಿ, ಆರು ಜನರು ಗಂಭೀರವಾಗಿ ಗಾಯಗೊಳ್ಳಲು ಕಾರಣವಾಗಿರುವ ವಿಚಿತ್ರ ಘಟನೆ ನಡೆದಿದೆ.
ಉತ್ತರ ಪ್ರದೇಶದ ಚಂದೌಲಿಯ ಹಮೀದ್ ಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹೆಚ್ಚುವರಿ ಪನೀರ್ ಕೊಡಲು ನಿರಾಕರಣೆ ಮಾಡಿದ ಕಾರಣಕ್ಕೆ ಕೋಪಗೊಂಡ ಮಿನಿ ಬಸ್ ಚಾಲಕ ಧರ್ಮೇಂದ್ರ ಯಾದವ್ ಆಲಿಯಾಸ್ ಂಬೂ ಎಂಬಾತ ತನ್ನ ವಾಹನವನ್ನೇ ಮದುವೆ ಮಂಟಪದೊಳಗೆ ನುಗ್ಗಿಸಿದ್ದಾರೆ. ಘಟನೆಯಲ್ಲಿ ವರನ ತಂದೆ ಹಾಗೂ ವಧುವಿನ ಚಿಕ್ಕಪ್ಪ ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯಿಂದ ಮದುವೆಯೇ ನಿಂತುಹೋಗುವ ಪರಿಸ್ಥಿತಿ ಎದುರಾಗಿತ್ತಾದರೂ, ಪೊಲೀಸರು ಮತ್ತು ಹಿರಿಯರ ಮಧ್ಯಸ್ಥಿಕೆಯಿಂದ ಮದುವೆಯನ್ನು ನೆರವೇರಿಸಲಾಯಿತು. ಗಾಯಗೊಂಡವರನ್ನು ಬಿಎಚ್‌ಯು ಅಪಘಾತ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಚಾಲಕ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಮೀದ್ ಪುರದ ರಾಜನಾಥ್ ಯಾದವ್ ಅವರ ಮಗಳ ಮದುವೆಗಾಗಿ ವಾರಣಾಸಿಯ ಮಂಡುದಿಹ್‌ನ ಪಹಾಡಿ ಗ್ರಾಮದಿಂದ ಮದುವೆ ದಿಬ್ಬಣ ಬಂದಿತ್ತು. ವರನ ಕಡೆಯವರನ್ನು ಕರೆತಂದಿದ್ದ ಮಿನಿ ಬಸ್ ಚಾಲಕ ಕೂಡ ಊಟಕ್ಕೆ ಕುಳಿತಿದ್ದ. ಈ ವೇಳೆ ಹೆಚ್ಚುವರಿ ಪನೀರ್ ಕೊಡಲು ಕೇಳಿಕೊಂಡ. ಅಡುಗೆಯವರು ನಿರಾಕರಿಸಿದಾಗ ಗದ್ದಲ ಏರ್ಪಟ್ಟಿತ್ತು. ಈ ವೇಳೆ ವಧುವಿನ ತಂದೆ ಜಂಬೂ ತಲೆಯ ಮೇಲೆ ತಟ್ಟಣಿಗೆಯಿಂದ ಹೊಡೆದಿದ್ದ ಎನ್ನಲಾಗಿದೆ.
ಈ ವೇಳೆ ಸ್ಥಳದಿಂದ ಹೊರಹೋದ ಚಾಲಕ ಜಂಬೂ, ಕೆಲ ಹೊತ್ತಿನಲ್ಲಿ ತನ್ನ ವಾಹನದಲ್ಲಿ ವೇಗವಾಗಿ ಮಂಟಪದೊಳಗೆ ನುಗ್ಗಿದ್ದ ಎನ್ನಲಾಗಿದೆ. ಈ ವೇಳೆ ವರನ ತಂದೆ ವಿನೋದ್ ಯಾದವ್ ತಲೆಗೆ ಗಂಭೀರ ಗಾಯಗಳಾಗಿದ್ದರೆ, ವಧುವಿನ ಚಿಕ್ಕಪ್ಪ ಜೋಗಿ ಯಾದವ್ ಅವರ ಕೈ ಮುರಿದುಹೋಗಿದೆ. ಅಲ್ಲದೆ ನಾಲ್ವರು ಅತಿಥಿಗಳಾದ ಬುಲ್ಲು ಯಾದವ್, ರವಿ, ದೂದ್ ನಾಥ್ ಮತ್ತು ಬಾಬುಲಾಲ್ ಪಟೇಲ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.