ಉಪಯುಕ್ತ ಸುದ್ದಿ

ಸೌರ ಪಂಪ್‌ಸೆಟ್‌ಗಾಗಿ ರಾಜ್ಯದ 18 ಸಾವಿರ ರೈತರ ನೋಂದಣಿ

Share It

ಬೆಂಗಳೂರಿನಲ್ಲಿ ಒಂದು ದಿನದ ಕುಸುಮ್- ರಾಷ್ಟ್ರೀಯ ಕಾರ್ಯಾಗಾರ

ಬೆಂಗಳೂರು,: ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ‌ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್‌ ಯೋಜನೆಯಡಿ ಸೌರಪಂಪ್‌ಸೆಟ್‌ ಪಡೆಯಲು ರಾಜ್ಯದ 18 ಸಾವಿರ ರೈತರು ನೋಂದಣಿ ಮಾಡಿದ್ದಾರೆ ಎಂದು ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್‌ ಗುಪ್ತಾ ಹೇಳಿದ್ದಾರೆ.

ಪಿಎಂ ಕುಸುಮ್ ಯೋಜನೆಯ ಸಮಪರ್ಕ ಅನುಷ್ಠಾನ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್‌) ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

“ಕುಸುಮ್‌ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್‌ ಅಳವಡಿಸಲು ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಸಬ್ಸಿಡಿ ಪಾಲನ್ನು ಶೇ. 30ರಿಂದ ಶೇ. 50ಕ್ಕೆ ಏರಿಸಿದೆ. ಇಂಧನ ಸಚಿವ ಕೆ.ಜೆ ಜಾರ್ಜ್‌ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಈವರೆಗೆ ರಾಜ್ಯದ ಸಾವಿರ ರೈತರು ಸೌರಪಂಪ್‌ ಸೆಟ್‌ ಪಡೆಯಲು ‘ಸೌರಮಿತ್ರ’ ವೆಬ್‌ಸೈಟ್‌/ ಆ್ಯಪ್‌ನಲ್ಲಿ ನೋಂದಣಿ ಮಾಡಿದ್ದಾರೆ,” ಎಂದು ತಿಳಿಸಿದರು.

“ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್‌ ಯೋಜನೆ ರೂಪಿಸಲಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಯೋಜನೆ ಅನುಷ್ಠಾನ ಹೊಣೆ ಹೊತ್ತಿದ್ದು, ರಾಜ್ಯದ ಎಲ್ಲ ಎಸ್ಕಾಂಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂದರು.

“ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಸೌರಶಕ್ತಿ ಬಳಕೆ ಉತ್ತೇಜನಕ್ಕೆ ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡಲಾಗುತ್ತಿದೆ. ಜತೆಗೆ, ಕುಸುಮ್‌ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್‌ ಸ್ಟ್ರಕ್ಚರ್‌, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಸೌರ ಪಂಪ್‌ಸೆಟ್‌ ಬಳಕೆಯಿಂದ 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ರಾತ್ರಿ ವೇಳೆ ರೈತರು ಕೃಷಿ ಚಟುವಟಿಕೆಗಳಿಗೆ ಪರದಾಡಬೇಕಿಲ್ಲ,”ಎಂದು ವಿವರಿಸಿದರು.

ಕುಸುಮ್‌ ಯೋಜನೆಯನ್ನು ಅನುಷ್ಠಾನಗೊಳಿಸಿರುವ ರಾಜ್ಯಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಐಆರ್‌ಇಡಿಎ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುಮಾರ್ ದಾಸ್, ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ದಿನೇಶದ ಜಗದಾಳೆ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ರೋಶನ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.‌ರುದ್ರಪ್ಪಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share It

You cannot copy content of this page