ಬೆಂಗಳೂರು: ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಸಂತ್ರಸ್ತರಾಗಿರುವವವರಿಗಾಗಿ ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಿಂದ ಪರಿಹಾರ ಸಾಮಗ್ರಿಗಳನ್ನು ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಕಳುಹಿಸಿಕೊಡಲಾಯಿತು.
ಅಗತ್ಯವಸ್ತುಗಳಾದ ಟೀ ಪುಡಿ, ಅಡಿಗೆ ಎಣ್ಣೆ, ಅಕ್ಕಿ, ಟೂತ್ ಪೇಸ್ಟ್, ಬ್ರಷ್, ಉಪ್ಪು, ಮಸಾಲ ಪದಾರ್ಥಗಳು, ರವೆ, ಮಗ್, ಬಕೆಟ್, ಸಕ್ಕರೆ ಮೊದಲಾದ ವಸ್ತುಗಳನ್ನು ಕಳುಹಿಸಕೊಡಲಾಯಿತು.
ಜತೆಗೆ, ಟಾರ್ಪಲ್‌ಗಳು, ಸೀರೆಗಳು, ಟವೆಲ್, ಬೆಡ್‌ಶೀಟ್, ಲುಂಗಿ, ಟೀಶರ್ಟ್ಗಳು ಸೇರಿದಂತೆ ಅಗತ್ಯ ಬಟ್ಟೆ ಮತ್ತು ಇನ್ನಿತರೆ ಹೊದಿಕೆ ಸಾಮಗ್ರಿಗಳನ್ನು ತುಂಬಿದ ೯ ಲಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಕಳುಹಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನಮ್ಮ ಕ್ಷೇತ್ರದಿಂದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗುತ್ತದೆ. ನಮ್ಮ ಕ್ಷೇತ್ರದ ನಾಯಕರು, ಕಾರ್ಯಕರ್ತರು ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ, ಸಂತ್ರಸ್ತರಿಗೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಕಳುಹಿಸಿಕೊಡುತ್ತೇವೆ ಎಂದರು.

ಅದೇ ರೀತಿ ವಯನಾಡಿನಲ್ಲಿ ಇಡೀ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯೇ ಮುಳುಗಡೆಯಾಗಿದೆ. ಹೀಗಾಗಿ, ಅಲ್ಲಿನ ಜನರಿಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಕಳುಹಿಸಿಕೊಡಲಾಗುತ್ತಿದೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೂ ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದರು.
ಕೇರಳದಲ್ಲಿ ನಡೆದ ಘಟನೆಗೆ ನಮ್ಮ ಇಡೀ ಪಕ್ಷ ಮಿಡಿದಿದೆ. ನಮ್ಮ ಸರಕಾರವೂ ನೆರವಿಗೆ ಮುಂದಾಗಿದೆ. ಈ ನಡುವೆ ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯಾ ರೆಡ್ಡಿ ಅವರ ನೇತೃತ್ವದಲ್ಲಿ ಜಯನಗರ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದಿಂದ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗುತ್ತಿದೆ.

- ಡಿ.ಕೆ.ಶಿವಕುಮಾರ್, ಡಿಸಿಎಂ