ಉಪಯುಕ್ತ ಸಿನಿಮಾ ಸುದ್ದಿ

ಎಸ್ ಸಿ/ಎಸ್.ಟಿಗೆ ಗುತ್ತಿಗೆ ನೌಕರಿಯಲ್ಲಿಯೂ ಮೀಸಲಾತಿ:ಸರಕಾರದ ಅಧಿಸೂಚನೆ ಪ್ರಕಟ

Share It

ಬೆಂಗಳೂರು: ರಾಜ್ಯ ಸರಕಾರ ತನ್ನ ಸರಕಾರದ ಗುತ್ತಿಗೆ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ಮೀಸಲಾತಿ ಜಾರಿಗೆ ತಂದಿದ್ದು, ಇಂದು ಅಧಿಕೃತ ಆದೇಶವನ್ನು ಪ್ರಕಟಿಸಿದೆ.

ರಾಜ್ಯ ಸರಕಾರದ ಕಚೇರಿಗಳಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳು, ವಾಹನ ಚಾಲಕರು, ಸ್ವಚ್ಛತಾ ಸಿಬ್ಬಂದಿ, ಗ್ರೂಪ್ ‘ಡಿ’ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಗಳಲ್ಲಿ ಈವರೆಗೆ ಯಾವುದೇ ಮೀಸಲಾತಿ ನಿಯಮಗಳು ಅನ್ವಯವಾಗುತ್ತಿರಲಿಲ್ಲ. ಹೀಗಾಗಿ, ಇಲ್ಲಿನ ನೇಮಕಾತಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ಒದಗಿಸಲು ನಿಯೋಜನೆಯಾಗುವ ಸಂಸ್ಥೆ ತಮಗಿಷ್ಟ ಬಂದವರನ್ನು ಈ ಮೇಲಿನ ಹುದ್ದೆಗಳಲ್ಲಿ ತಂದು ತುಂಬಿಕೊಳ್ಳುತ್ತಿದ್ದರು. ಇದರಿಂದಾಗಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳ ಜತೆಗೆ ಪೈಪೋಟಿ ಮಾಡಬೇಕಿತ್ತು ಅಥವಾ ಸರಕಾರಿ ಹುದ್ದೆಗಳಿಗಷ್ಟೇ ಅರ್ಜಿ ಹಾಕಬೇಕಿತ್ತು. ಈ ಕಾರಣದಿಂದ ಕೆಲವರು ಹೋರಾಟಗಾರರು, ಸರಕಾರದ ಗಮನಸೆಳೆದು, ಗುತ್ತಿಗೆ ಆಧಾರದ ನೇಮಕದಲ್ಲೂ ಮೀಸಲಾತಿ ತರುವಂತೆ ಮನವಿ ಮಾಡಿದ್ದರು.

ರಾಜ್ಯ ಸರಕಾರ ಈ ಮನವಿ ಪುರಸ್ಕರಿಸಿದ್ದು, ಅದರಂತೆ 2022 ರ ಡಿಸೆಂಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿಗೆ ತರಲು ಒಪ್ಪಿಗೆ ಸೂಚಿಸಿತ್ತು. ಇದೀಗ ಗೆಜೆಟ್ ನೋಟಿಫಿಕೇಷನ್ ಮಾಡುವ ಮೂಲಕ ದಲಿತ ಮತ್ತು ಹಿಂದುಳಿದ ಸಮುದಾಯಗಳ ಉದ್ಯೋಗದ ಆಸೆಯನ್ನು ಹೆಚ್ಚಿಸಿದೆ.

ಮೀಸಲಾತಿ ನಿಗದಿಪಡಿಸಿರುವ ಸರಕಾರ ಕೆಲವೊಂದು ನಿಯಮಗಳನ್ನು ಅಳವಡಿಸಿದ್ದು, ಈ ನಿಯಮಗಳಿಗೆ ಅನುಗುಣವಾಗಿಯೇ ನೇಮಕಾತಿ ಗುತ್ತಿಗೆ ಪಡೆಯುವ ಕಂಪನಿ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಒಂದು ವೇಳೆ ಅದರನ್ವಯ ನೇಮಕ ಮಾಡಿಕೊಳ್ಳದಿದ್ದರೆ, ಅಂತಹ ಕಂಪನಿಗಳಿಗೆ ನೇಮಕಾತಿ ಅವಕಾಶವನ್ನೇ ನೀಡದಿರಲು ಸರಕಾರ ತೀರ್ಮಾನಿಸಿದೆ.

  • ಹೊರಗುತ್ತಿಗೆ ಮೀಸಲಾತಿ 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಕ್ಕೆ ಅನ್ವಯವಾಗುವುದಿಲ್ಲ
  • ಪ್ರತಿ ವರ್ಷ ಟೆಂಡರ್ ಕರೆದಾಗ ಏಜೆನ್ಸಿಗಳಿಗೆ ಮೀಸಲಾತಿ ಅನ್ವಯ ಸಿಬ್ಬಂದಿ ಪಡೆಯಲು ಷರತ್ತು ವಿಧಿಸುವುದು
  • ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾದ ಪ್ರಮಾಣದಲ್ಲಿ ಶೇ. 33 ರಷ್ಟನ್ನು ಮಹಿಳೆಯರಿಗೆ ಮೀಸಲಿಡುವುದು
  • ಹೊರಗುತ್ತಿಗೆ ಕಂಪನಿ ನೇಮಕ ಮಾಡಿರುವ ಸಿಬ್ಬಂದಿ ಪಟ್ಟಿ ಮೀಸಲಾತಿ ನಿಯಮಕ್ಕೆ ಅನುಗುಣವಾಗಿ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳುವುದು
  • ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಈ ಬಗ್ಗೆ ಪರಿಶೀಲಿಸಿ, ನಂತರವಷ್ಟೇ ಕಾರ್ಯದೇಶ ನೀಡುವುದು
  • ಒಂದು ವೇಳೆ ನೇಮಕವಾದ ಸಿಬ್ಬಂದಿ ಅರ್ಧದಲ್ಲಿ ಬಿಟ್ಟು ಹೋದರೆ, ಅದೇ ವರ್ಗದ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸುವುದು
  • ಮೀಸಲಾತಿ ನಿಯಮವು ಕನಿಷ್ಠ 20 ಕ್ಕಿಂತ ಕಡಿಮೆ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ
  • ಸಿಬ್ಬಂದಿ ನೇಮಕದಲ್ಲಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 60 ವರ್ಷದ ವಯೋಮಿತಿಯ ಸಿಬ್ಬಂದಿಯ ನೇಮಕಕ್ಕೆ ಅವಕಾಶವಿದೆ.

Share It

You cannot copy content of this page