ಬೆಂಗಳೂರು: ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂಬ ರಾಜ್ಯ ಸರಕಾರದ ಮಸೂದೆಗೆ ಕನ್ನಡ ಸಂಟಘನೆಗಳು ಖುಷಿ ವ್ಯಕ್ತಪಡಿಸಿದ್ದು, ಉದ್ಯಮಿಗಳು ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸರಕಾರ ಅಧಿವೇಶನದಲ್ಲಿ ಕನ್ನಡಿಗರ ಉದ್ಯೋಗ ಮೀಸಲಾತಿ ಮಸೂದೆ ಮಂಡನೆ ಮಾಡಿದೆ. ಇದು ಇದೀಗ ಬಹುಚರ್ಚಿತ ವಿಚಾರವಾಗಿದ್ದು, ಈ ನಿರ್ಧಾರದಿಂದ ಬೆಂಗಳೂರಿನ ಭವಿಷ್ಯ ಹಾಳಾಗಲಿದೆ ಎಂದು ಮೋಹನ್ ದಾಸ್ ಪೈ ಕಿಡಿಕಾರಿದ್ದಾರೆ.
ಕನ್ನಡಿಗರಿಗೆ ಸರಿಯಾದ ಕೌಶಲ್ಯ ತರಬೇತಿ ಇಲ್ಲ, ಕನ್ನಡಿಗರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡಿಗರನ್ನು ನಂಬಿಕೊಂಡು ಉದ್ಯಮ ನಡೆಸಲು ಸಾಧ್ಯವಿಲ್ಲ. ಇದು ಸಂವಿಧಾನ ವಿರೋಧಿ ನಡೆ ಎಂದು ಗುಡುಗಿದ್ದಾರೆ. ಇದರ ಜಾರಿ ಅಸಾಧ್ಯ ಎಂದು ಸವಾಲು ಹಾಕಿದ್ದಾರೆ.
ಇನ್ನು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ, ಕೌಶಲ್ಯದ ಕೆಲಸಕ್ಕೆ ನಮಗೆ ನುರಿತ ಸಿಬ್ಬಂದಿ ಬೇಕಾಗುತ್ತದೆ. ಇಂತಹ ನಿಯಮ ಜಾರಿಗೆ ತಂದರೆ ತಾಂತ್ರಿಕ ಕೆಲಸಗಳಲ್ಲಿ ನಾವು ನೈಪುಣ್ಯತೆ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರದ ಮಸೂದೆಗೆ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ.
ಕನ್ನಡಿಗರ ನೆಲ, ಜಲ ಹಾಗೂ ಸರಕಾರದ ತೆರಿಗೆ ವಿನಾಯಿತಿ ಪಡೆದು ಕಂಪನಿ ನಡೆಸುತ್ತಿರುವವರು ಕನ್ನಡಿಗರಿಗೆ ಮೀಸಲು ಕೊಡುವುದು ದೊಡ್ಡ ವಿಷಯವೇನಲ್ಲ. ಕನ್ನಡಿಗರು ಕೌಶಲ್ಯದಲ್ಲಿ ಯಾರಿಗೂ ಕಡಿಮೆಯಿಲ್ಲ. ನಾವು ದೇಶ ವಿದೇಶಕ್ಕೆ ಪ್ರತಿಭೆಗಳನ್ನು ಎರವಲು ಕೊಡುವುದಾದರೆ, ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಸಮಸ್ಯೆಯೇನು ಎಂದು ಪ್ರಶ್ನಿಸಿದ್ದಾರೆ.