ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಗನ್ ತೋರಿಸಿ ಅವರನ್ನು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಸಿದ ಘಟನೆ ಗೃಹ ಸಚಿವರ ನಿವಾಸದ ಸಮೀಪದಲ್ಲಿಯೇ ನಡೆದಿದೆ.
ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸವಿರುವ ಸದಾಶಿವನಗರದ ಬಳಿ ಅಪಾರ್ಟ್‌ಮೆಂಟ್‌ವೊಂದರ ಕೆಲಸ ನಡೆಯುತ್ತಿದ್ದು, ಅಲ್ಲಿಗೆ ಟೈಲ್ಸ್ ತುಂಬಿಕೊಂಡು ಲಾರಿಯೊಂದು ಆಗಮಿಸಿತ್ತು. ಸಚಿವರ ನಿವಾಸದ ಬಳಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣದಿಂದ ಲಾರಿ ನಿಧಾನವಾಗಿ ಚಲಿಸುತ್ತಿತ್ತು.
ಈ ವೇಳೆ ಮನೆಯಿಂದ ಹೊರಬಂದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಲಾರಿ ಚಾಲಕನಿಗೆ ಬೇಗ ಇಲ್ಲಿಂದ ಹೋಗು ಎಂದು ಬೆದರಿಸಿದ್ದಾರೆ. ಲಾರಿ ಚಲಿಸುವುದು ತಡವಾದ ಕಾರಣ ಮನೆಯೊಳಗೆ ಹೋಗಿ ಗನ್ ತಂದು ಚಾಲಕನಿಗೆ ತೋರಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿದ್ದವರು ಸಮಾಧಾನ ಮಾಡಲು ಹೋದರೂ ಕೇಳದ ನಿವೃತ್ತ ಪೊಲೀಸ್ ಅಧಿಕಾರಿ, ಮೂರ್ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಕೆಲಸದ ಸ್ಥಳಕ್ಕೂ ಹೋಗಿ, ಕಾರ್ಮಿಕರಿಗೂ ಗನ್ ತೋರಿಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗೃಹ ಸಚಿವರ ನಿವಾಸದ ಬಳಿ ಕೆಲ ಕಾಲ ಆತಂಕ ಸೃಷ್ಟಿಯಾಗಿದ್ದು, ಗನ್ ಕೈಯ್ಯಲ್ಲಿಡಿದು ಅಧಿಕಾರಿ ಕಿರುಚಾಡುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಧಿಕಾರಿಯ ನಡೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.