ಸುದ್ದಿ

ಹಾಸನ‌‌-ದಾವಣಗೆರೆ ಕಾಂಗ್ರೆಸ್ ಸಂಸದರ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ!

Share It

ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಚುನಾಯಿತರಾದ ಕಾಂಗ್ರೆಸ್‌ನ ಶ್ರೇಯಸ್‌ ಎಂ. ಪಟೇಲ್‌ ಮತ್ತು ದಾವಣಗೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್‌ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಗುರುವಾರ ಹೈಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿದೆ.

ಈ ಅರ್ಜಿಗಳು ಕಚೇರಿಯ ಪರಿಶೀಲನೆ ನಂತರ ಪ್ರತ್ಯೇಕ ನ್ಯಾಯಪೀಠಗಳ ಮುಂದೆ ವಿಚಾರಣೆಗೆ ಬರಬೇಕಿದೆ. ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ವಕೀಲ ದೇವರಾಜೇಗೌಡ ಪುತ್ರ ಡಿ.ಚರಣ್‌ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಶ್ರೇಯಸ್‌ ಪಟೇಲ್‌ ನಾಮಪತ್ರ ಕ್ರಮಬದ್ಧ ವಾಗಿಲ್ಲವೆಂದು ಘೋಷಿಸುವಂತೆ ಕೋರಿದ್ದಾರೆ. ಅಲ್ಲದೆ, ಸಂಸದರಾಗಿ ಶ್ರೇಯಸ್‌ ಎಂ. ಪಟೇಲ್‌ ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿಲ್ಲ ಮತ್ತು ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲಎಂದು ದೂರಿದ್ದಾರೆ.

ಚು.ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪ

ಇದಲ್ಲದೆ, ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿಗಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಆ ಕುರಿತು ಆಯೋಗಕ್ಕೆ ಸರಿಯಾದ ಲೆಕ್ಕ ನೀಡಿಲ್ಲ. ಹಾಗಾಗಿ, ಅವರ ಆಯ್ಕೆಯನ್ನೇ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ದಾವಣಗೆರೆ ಸಂಸದೆ ನೇಮಕ ಅಸಿಂಧು ಕೋರಿ ಅರ್ಜಿ!

ಇದೇ ವೇಳೆ ದಾವಣಗೆರೆ ಸಂಸದರಾಗಿ ಡಾ. ಪ್ರಭಾ ಮಲ್ಲಿಕಾರ್ಜುನ ಆಯ್ಕೆ ಅಸಿಂಧು ಕೋರಿ ಪರಾಜಿತ ಅಭ್ಯರ್ಥಿ ಜಿ.ಎಸ್‌. ಗಾಯತ್ರಿ ಸಿದ್ದೇಶ್ವರ ತಕರಾರು ಅರ್ಜಿ ಹೂಡಿದ್ದಾರೆ. ಪ್ರತಿವಾದಿ ಗ್ಯಾರಂಟಿ ಕಾರ್ಡ್‌ ವಿತರಿಸಿ ಮತದಾರರಿಗೆ ಆಮಿಷವೊಡ್ಡಿರುವುದಲ್ಲದೆ, ಮಹಿಳೆಯರಿಗೆ 1 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯಿದೆಗೆ ವಿರುದ್ಧವಾದುದು. ಮತದಾರರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧುವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಎನ್.ಡಿ.ಎ ಅಭ್ಯರ್ಥಿಗಳನ್ನು ಸೋಲಿಸಿ ಗೆದ್ದಿದ್ದರು

ಏಪ್ರಿಲ್‌-ಮೇನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರನ್ನು ಶ್ರೇಯಸ್‌ ಪಟೇಲ್‌ ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇನ್ನು ದಾವಣಗೆರೆಯಲ್ಲಿ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ ಅವರನ್ನು ಸೋಲಿಸಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸಂಸತ್‌ ಪ್ರವೇಶಿಸಿದ್ದರು.

ಶಾಮನೂರು ಕುಟುಂಬದ 3ನೇ ಜನಪ್ರತಿನಿಧಿ

ಡಾ. ಪ್ರಭಾ ಮಲ್ಲಿಕಾರ್ಜುನ ಅವರು ದಾವಣಗೆರೆಯ ಮೊದಲ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದರು. ಸ್ವಾತಂತ್ರ್ಯ ಬಳಿಕ ದಾವಣಗೆರೆ ಲೋಕಸಭಾ ಕ್ಷೇತ್ರವು 1977 ಬಳಿಕ ಪ್ರತ್ಯೇಕ ಕ್ಷೇತ್ರವಾಯಿತು. ಆ ಬಳಿಕ ಈ ಬಾರಿಯೇ ಮೊದಲು ಮಹಿಳಾ ಸಂಸದರೊಬ್ಬರು ಆಯ್ಕೆಯಾಗಿದ್ದಾರೆ. ವೃತ್ತಿಪರ ದಂತ ವೈದ್ಯೆಯಾಗಿರುವ ಪ್ರಭಾ, ಶಾಮನೂರು ಶಿವಶಂಕರಪ್ಪ ಅವರ ಸೊಸೆ, ತೋಟಗಾರಿಕೆ, ಗಣಿ ಭೂ ವಿಜ್ಞಾನ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ ಅವರ ಪತ್ನಿ.


Share It

You cannot copy content of this page