ಅಪರಾಧ ಸುದ್ದಿ

ಮಾದನಾಯಕನಹಳ್ಳಿ ಜ್ಯುವೆಲರ್ಸ್‌ನಲ್ಲಿ ನಡೆದ ದರೋಡೆ: ಏಳೇ ದಿನಗಳಲ್ಲಿ ಆರೋಪಿಗಳ ಬಂಧನ

Share It

ನೆಲಮಂಗಲ: ಮಾದನಾಯಕನಹಳ್ಳಿ ರಾಮ್​​ದೇವ್ ಜ್ಯುವೆಲರ್ಸ್‌ನಲ್ಲಿ ಗನ್ ತೋರಿಸಿ ನಡೆದ ದರೋಡೆ ಪ್ರಕರಣವನ್ನು ಬೆಂಗಳೂರು ವಾಯುವ್ಯ ವಿಭಾಗದ ಪೊಲೀಸರು ಕೇವಲ ಏಳೇ ದಿನಗಳಲ್ಲಿ ಭೇದಿಸಿದ್ದಾರೆ.

ಚಿನ್ನದ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ರಾಮ್​​ದೇವ್ ಜ್ಯುವೆಲರ್ಸ್‌ನಲ್ಲಿ ದರೋಡೆಗೆ ಸಂಚು ರೂಪಿಸಿದ್ದ ರಾಜಸ್ಥಾನದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅನೂಪ್ ಸಿಂಗ್, ರವಿ, ಅಂಕಿತ್, ಅರುಣ್, ಅನೂಪ್ ರಾಮ್​​ ಬಂಧಿತರು.

ಜನವರಿ 27ರ ಸಂಜೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದ ರಾಮ್​​ದೇವ್ ಜ್ಯುವೆಲರ್ಸ್​ಗೆ ನುಗ್ಗಿದ್ದ ದರೋಡೆಕೊರರು, ಗನ್ ತೋರಿಸಿ 30 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ದೋಚಿ ಪರಾರಿಯಾಗಿದ್ದರು.

ಜ್ಯುವೆಲರ್ಸ್​ನಲ್ಲಿ ಮಕ್ಕಳಿರುವ ಸಮಯದಲ್ಲಿ ನುಗ್ಗಿ ಕಿವಿಯೊಲೆ ತೋರಿಸುವಂತೆ ಹೇಳಿದ್ದಾರೆ. ಓರ್ವ ಗನ್ ತೋರಿಸಿ ಹೆದರಿಸಿದ್ದಾನೆ. ಮತ್ತೋರ್ವ 30 ಗ್ರಾಂ ಚಿನ್ನಾಭರಣ 50 ಸಾವಿರ ನಗದು ದೋಚಿ, ಸ್ಥಳದಿಂದ ಪರಾರಿಯಾಗಿದ್ದರು. ಪರಾರಿಯಾಗುವ ಸಮಯದಲ್ಲಿ ಆರೋಪಿಗಳು ಮೊಬೈಲ್ ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಮೊಬೈಲ್ ಜಾಡು ಹಿಡಿದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಲ್ಲಿ ಅಂಕಿತ್ ಮಾದನಾಯಕನಹಳ್ಳಿ ವಾಸವಿದ್ದ. ಕಚೋರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಎಷ್ಟು ದಿನ ಈ ರೀತಿ ಜೀವನ ಸಾಗಿಸುವುದೆಂದು ನಿರ್ಧರಿಸಿದ್ದ ಆತ ದರೋಡೆಗೆ ಪ್ಲ್ಯಾನ್ ಮಾಡಿದ್ದ. ಈತನಿಗೆ ರವಿ ಎಂಬಾತ ಸಾಥ್ ನೀಡಿದ್ದ. ರವಿ ರಾಜಸ್ಥಾನದಲ್ಲಿದ್ದು, ಆತನ ಬಳಿ ಪಿಸ್ತೂಲ್ ಕೂಡ ಇತ್ತು. ಇದನ್ನೇ ಬಂಡವಾಳ‌ ಮಾಡಿಕೊಂಡಿದ್ದ ಆರೋಪಿಗಳು ದರೋಡೆಗೆ ಪ್ಲ್ಯಾನ್ ಮಾಡಿದ್ದರು.

ಪ್ಲ್ಯಾನ್​​ ಪ್ರಕಾರವೇ ಜ.27ರಂದು ರಾಮ್​​ದೇವ್ ಜ್ಯುವೆಲರ್ಸ್​ಗೆ ನುಗ್ಗಿ ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.


Share It

You cannot copy content of this page