ಅಪರಾಧ ಸುದ್ದಿ

ಪೊಲೀಸರ ಸೋಗಿನಲ್ಲಿ ನಡೆದಿದ್ದ ದರೋಡೆ ಪ್ರಕರಣ : ಆಪ್ತಮಿತ್ರನಿಂದಲೇ ನಡೆದಿತ್ತು ಸ್ಕೆಚ್

Share It

ಬೆಂಗಳೂರು: ಪೊಲೀಸರ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ (52) ಬಂಧಿತ ಆರೋಪಿ. ಬಿಇಎಲ್ ಲೇಔಟ್‌ನ ಹೊಂಬಾಳೆಗೌಡ ಎಂಬ ಉದ್ಯಮಿ‌ ಮನೆಗೆ ಫೆ. 16ರಂದು‌ ಮಧ್ಯಾಹ್ನ ಪೊಲೀಸರ ಸೋಗಿನಲ್ಲಿ ಎರಡ್ಮೂರು ಮಂದಿ ಆರೋಪಿಗಳು ನುಗ್ಗಿ, ಗನ್ ಮತ್ತು ಚಾಕು ತೋರಿಸಿ ಬೆದರಿಸಿದ್ದರು. ಬಳಿಕ ಹೊಂಬಾಳೇಗೌಡ ದಂಪತಿಯ ಕೈಕಾಲು ಕಟ್ಟಿಹಾಕಿ, ಬಾಯಿಗೆ ಪ್ಲಾಸ್ಟರ್ ಹಚ್ಚಿ, ಬೀರುಗಳಿಂದ 20 ಲಕ್ಷ ನಗದು ಮತ್ತು ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ ದೋಚಿದ್ದರು.

ದರೋಡೆಕೋರರು ದಂಪತಿ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಮನೆಯ ಸಿಸಿಟಿವಿ ಡಿವಿಆರ್ (DVR) ತೆಗೆದುಕೊಂಡು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಪೊಲೀಸರು ನಾಗೇಂದ್ರ ಹಾಗೂ ಬಚ್ಚನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ತನಿಖೆ ಮುಂದುವರೆದಾಗ ಅಸಲಿ ಸತ್ಯ ಬಯಲಾಗಿದ್ದು, ಹೊಂಬಾಳೇಗೌಡರ ಆಪ್ತ ಸ್ನೇಹಿತ ಬೆಟ್ಟೇಗೌಡನ ಸಂಚು ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆ ಮಾಲೀಕ ಹೊಂಬಾಳೇಗೌಡ ಸೈಟ್​​ ಮಾರುವ ವಿಚಾರವಾಗಿ ಬೆಟ್ಟೇಗೌಡನ ಬಳಿ ಸ್ಟ್ಯಾಂಪ್ ಪೇಪರ್​​ ಮಾಡಿಸಿದ್ದರು. ಹೀಗಾಗಿ ಸ್ನೇಹಿತನ ಬಳಿ ಸೈಟ್ ಮಾರಿದ ಹಣ ಇದೆ‌ ಎಂದು ಆರೋಪಿ ತಿಳಿದಿದ್ದ. ದರೋಡೆ ಮಾಡುವಂತೆ ಜೈಲಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ನಾಗೇಂದ್ರನಿಗೆ ಐಡಿಯಾ ಕೊಟ್ಟಿದ್ದ. ಶಿವಾಜಿನಗರದಲ್ಲಿ ಶೂಟಿಂಗ್​​ಗೆ ಎಂದು ಹೇಳಿ ಸಬ್ ಇನ್ಸ್​​ಪೆಕ್ಟರ್ ಡ್ರೆಸ್ ಬಾಡಿಗೆಗೆ ತಂದಿದ್ದ ನಾಗೇಂದ್ರ, ಅದೇ ಡ್ರೆಸ್​​ ಹಾಕಿಕೊಂಡು ಹೊಂಬಾಳೇಗೌಡರ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ಮಂಗಳಮ್ಮ ಹಾಗೂ ಮೊಮ್ಮಕ್ಕಳೊಂದಿಗೆ ಮನೆಯಲ್ಲಿದ್ದ ಹೊಂಬಾಳೇಗೌಡ ಅವರನ್ನು ಬೆದರಿಸಿದ್ದ ಆರೋಪಿಗಳು, ಬಂದೂಕು ಮತ್ತು ಚಾಕುವಿನಿಂದ ಬೆದರಿಸಿದ್ದರು. ಅಲ್ಲದೆ, ಅವರ ಕೈಕಾಲುಗಳನ್ನು ಕಟ್ಟಿಹಾಕಿ, ನಗದು ಮತ್ತು ಚಿನ್ನಾಭರಣ ದೋಚಿದ್ದರು.


Share It

You cannot copy content of this page