ಅಪರಾಧ ಸುದ್ದಿ

ಡಕಾಯಿತಿ ಪ್ರಕರಣ |ಪ್ರಕರಣ ಭೇದಿಸಿದ ಪೊಲೀಸರು; ಮೂವರ ಬಂಧನ

Share It

ಬೀದರ್:‌ ನಗರದ ಓಲ್ಡ್ ಆದರ್ಶ ಕಾಲೋನಿಯಲ್ಲಿ ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 15.55 ಲಕ್ಷ ರೂ. ಮೌಲ್ಯದ ನಗ-ನಾಣ್ಯ ದೋಚಿದ್ದ ಪ್ರಕರಣವನ್ನು ಶುಕ್ರವಾರ (ಮೇ 02) ಬೇಧಿಸಿರುವ ಜಿಲ್ಲಾ ಪೊಲೀಸರು ಮೂವರು ಡಕಾಯಿತರನ್ನು ಬಂಧಿಸಿದ್ದಾರೆ. ಈ ವೇಳೆ ಮುಖ್ಯ ಪೇದೆಗೆ ಚಾಕುವಿನಿಂದ ಇರಿತವಾಗಿದ್ದರೆ ಆರೋಪಿಯೊಬ್ಬನ ಕಾಲಿಗೆ ಗುಂಡೇಟು ತಗುಲಿದೆ.

ಕಳೆದ ಏ.26ರಂದು ನಸುಕಿನ ಜಾವ ಮನೆಯ ಬಾಗಿಲು ಮುರಿದು, ಒಳಗೆ ಪ್ರವೇಶಿಸಿದ್ದ ಐವರು ಮುಸುಕುಧಾರಿಗಳು ಮನೆಯವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಸುಲಿಗೆ ಮಾಡಿದ್ದರು. ಈ ಪ್ರಕರಣ ನಗರದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಜಿಲ್ಲಾ ಪೊಲೀಸರು ಘಟನೆ ನಡೆದ ಒಂದು ವಾರದಲ್ಲಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಡಕಾಯಿತರು ಮಹಾರಾಷ್ಟ್ರದವರು: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರಳಿಯ ಕರ್ತಾರ್ ಸಿಂಗ್, ಆತನ ಸಹಹೋದರನಾದ ಬೀದರ ನಿವಾಸಿ ಜಗಜೀತ್‌ಸಿಂಗ್ ಹಾಗೂ ಪುಣೆಯ ಅಕ್ಷಯ ಬಂಧಿತ ಆರೋಪಿಗಳಾಗಿದ್ದಾರೆ. ಕಳವು ಮಾಡಿದ ಚಿನ್ನವನ್ನು ಮಾರಾಟಕ್ಕೆ ಸಹಕಾರ ನೀಡಿದ್ದ ವ್ಯಕ್ತಿಯನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆ ವೇಳೆ ಪೊಲೀಸರ ಗುಂಡೇಟಿನಿಂದ ಕರ್ತಾರಸಿಂಗ್ ಬಲಗಾಲಿಗೆ ಗುಂಡು ತಗುಲಿದ್ದರೆ, ಡಕಾಯಿತನಿಂದ ಚಾಕು ಇರಿತಕ್ಕೆ ಮುಖ್ಯ ಪೇದೆ ಮಕ್ಸೂದ್ ಅವರ ಭುಜಕ್ಕೆ ಗಂಭೀರ ಗಾಯವಾಗಿದ್ದು, ಇಬ್ಬರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಹಿನ್ನೆಲೆ: ನಗರದ ಓಲ್ಡ್ ಆದರ್ಶ ಕಾಲೋನಿಯಲ್ಲಿ ಕಳೆದ ಶನಿವಾರ ನಸುಕಿನ ಜಾವ ಡಿಸಿ ಕಚೇರಿಯಲ್ಲಿ ಸೂಪರಿಟೆಂಡೆಂಟ್ ಆಗಿರುವ ಜ್ಯೋತಿಲತಾ ಸಂತೋಷ ಕುಮಾರ ಅವರ ಮನೆಗೆ ನುಗ್ಗಿದ್ದ ಮುಸುಕುಧಾರಿಗಳು ಈ ದುಷ್ಕೃತ್ಯ ನಡೆಸಿದ್ದರು. ಜ್ಯೋತಿಲತಾ, ಅವರ ತಾಯಿ ಮತ್ತು ಮಗನಿಗೆ ಚಾಕು ಮತ್ತು ಏರ್ ಗನ್ ತೋರಿಸಿ 15.55 ಲಕ್ಷ ಮೌಲ್ಯದ ಚಿನ್ನ ಮತ್ತು ನಗದು ಹಣ ದೋಚಿದ್ದರು. ಪೊಲೀಸರಿಗೆ ಹೇಳದಂತೆ ಬಾತ್‌ರೂಂನಲ್ಲಿ ಕೂಡಿಹಾಕಿದ್ದರು. ಈ ಕುರಿತು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್‌ಪಿ ಮಾರ್ಗದರ್ಶನದಲ್ಲಿ ಗಾಂಧಿಗಂಜ್ ಮತ್ತು ಬೀದರ ಗ್ರಾಮೀಣ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆರೋಪಿಗಳು ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ಓಡಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಈ ತಂಡ ದಾಳಿ ನಡೆದಿದೆ. ಡಕಾಯಿತರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಕರ್ತಾರ್‌ಸಿಂಗ್ ಎಂಬಾತ ಚಾಕುವಿನಿಂದ ಹೆಡ್ ಕಾನ್‌ಸ್ಟೆಬಲ್ ಮಕ್ಸೂದ್ ಅವರ ಭುಜಕ್ಕೆ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಗಮನಿಸಿದ ಸಿಪಿಐ ಜಿಎಸ್ ಬಿರಾದಾರ ಅವರು ಮೂರು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಕರ್ತಾರ್ ಸಿಂಗ್ ಗಾಯಗೊಂಡಿದ್ದಾನೆ. ಈ ವೇಳೆ ಆತನನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಪರಾರಿಯಾಗಲು ಯತ್ನಿಸಿದ ಜಗಜೀತ್‌ಸಿಂಗ್ ಹಾಗೂ ಅಕ್ಷಯ್‌ನನ್ನು ಸಹ ಬಂಧಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬ್ರಿಮ್ಸ್ ಆಸ್ಪತ್ರೆಗೆ ತೆರಳಿ ಗಾಯಗೊಂಡಿರುವ ಮುಖ್ಯ ಪೇದೆ ಮಕ್ಸೂದ್ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್.ಪಿ ಪ್ರದೀಪ್‌ ಗುಂಟಿ, ಬೀದರನ ಓಲ್ಡ್ ಆದರ್ಶ ಕಾಲೋನಿಯ ಮನೆಯಲ್ಲಿ ಡಕಾಯಿತಿ ಪ್ರಕರಣವನ್ನು ಬೇಧಿಸಲಾಗಿದ್ದು, ಐವರು ಆರೋಪಿಗಳಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಕರ್ತಾರಸಿಂಗ್ ಮತ್ತು ಜಗಜೀತ್‌ಸಿಂಗ್ ಇಬ್ಬರು ಸಹೋದರರು. ಸದ್ಯ ಬೀದರನ ನಿವಾಸಿಯಾಗಿರುವ ಜಗಜೀತ್‌ಸಿಂಗ್‌ನ ಮಾಹಿತಿ ಮೇರೆಗೆ ತನ್ನ ಸಹೋದರ ಸೇರಿ ಐವರು ಡಕಾಯಿತರು ಮನೆ ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ಚಿನ್ನಾಭರಣವನ್ನು ಪರಳಿಯಲ್ಲಿ ಮಾರಾಟ ಮಾಡಿ, ಐದು ಜನರು ಸಮನಾಗಿ ಹಂಚಿಕೊಂಡಿದ್ದರು. ಇದಕ್ಕೆ ನೆರವು ನೀಡಿದ್ದ ವ್ಯಕ್ತಿಯನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಕರ್ತಾರ್‌ಸಿಂಗ್ ವಿರುದ್ಧ ವಿವಿಧೆಡೆ 18 ಡಕಾಯಿತಿ ಪ್ರಕರಣಗಳಿವೆ. ಇನ್ನಿಬ್ಬರು ಕಿಡಿಗೇಡಿಗಳ ಬಂಧನಕ್ಕೆ ಜಾಲ ಬೀಸಲಾಗಿದ್ದು, ಚಿನ್ನಾಭರಣ ಜಪ್ತಿ ಪ್ರಕ್ರಿಯೆ ಸಹ ನಡೆದಿದೆ ಎಂದರು.


Share It

You cannot copy content of this page