ಉದ್ಯಮಿ ಸಿ.ಜೆ. ರಾಯ್ ಅವರ ಅಕಾಲಿಕ ಸಾವಿನ ಪ್ರಕರಣದಲ್ಲಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿ.ಜೆ. ರಾಯ್ ಬಳಸುತ್ತಿದ್ದ ಎರಡು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ಪರಿಶೀಲನೆ ಆರಂಭಿಸಿದ್ದಾರೆ. ಈ ನಡುವೆ, ಆದಾಯ ತೆರಿಗೆ ಇಲಾಖೆಯ ಒತ್ತಡವೇ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನವನ್ನು ಅವರ ಸಹೋದರ ಬಾಬು ರಾಯ್ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಬೆನ್ನಲ್ಲೇ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ.
ಕುಟುಂಬಸ್ಥರ ವಿಚಾರಣೆ
ಸಿ.ಜೆ. ರಾಯ್ ಅವರ ಕುಟುಂಬದ ಸದಸ್ಯರು ಬೆಂಗಳೂರಿಗೆ ಆಗಮಿಸಿದ್ದು, ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ತನಿಖೆಯ ಭಾಗವಾಗಿ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಸಿ.ಜೆ. ರಾಯ್ ಅವರ ವೈಯಕ್ತಿಕ ಹಾಗೂ ವೃತ್ತಿಪರ ಹಿನ್ನೆಲೆಯ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ತನಿಖೆಗೆ ಮಹತ್ವದ ಸಾಕ್ಷಿಯಾಗಿ ಅವರ ಎರಡು ಮೊಬೈಲ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸಾವಿನ ಮುನ್ನ ನಡೆದ ಫೋನ್ ಕರೆ
ಈ ಕುರಿತು ಮಾತನಾಡಿದ ಸಹೋದರ ಬಾಬು ರಾಯ್, ಸಾವಿಗೆ ಕೆಲ ಗಂಟೆಗಳ ಮುನ್ನ ಸಿ.ಜೆ. ರಾಯ್ ಎರಡು ಬಾರಿ ಕರೆ ಮಾಡಿದ್ದರು ಎಂದು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸುಮಾರು 10.40ರ ಸಮಯದಲ್ಲಿ ಕರೆ ಮಾಡಿ, “ಎಲ್ಲಿದ್ದೀಯ? ಮಾತನಾಡಬೇಕು” ಎಂದು ಕೇಳಿದ್ದರು. ಅದಕ್ಕೆ ನಾನು ಸಂಜೆ 7 ಗಂಟೆಗೆ ಬರುತ್ತೇನೆ ಎಂದು ಉತ್ತರಿಸಿದ್ದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಐಟಿ ಇಲಾಖೆಯ ಒತ್ತಡದ ಆರೋಪ
ಬಾಬು ರಾಯ್ ಅವರ ಪ್ರಕಾರ, ಸಿ.ಜೆ. ರಾಯ್ ಅವರಿಗೆ ಸಾಲದ ಸಮಸ್ಯೆ, ಬೆದರಿಕೆ ಅಥವಾ ಇತರ ವೈಯಕ್ತಿಕ ಒತ್ತಡಗಳು ಇರಲಿಲ್ಲ. ಆದಾಯ ತೆರಿಗೆ ಇಲಾಖೆಯ ತನಿಖೆಯ ಒತ್ತಡವನ್ನೇ ಹೊರತುಪಡಿಸಿ ಬೇರೆ ಯಾವುದೇ ಮಾನಸಿಕ ಒತ್ತಡಗಳು ತಮ್ಮ ಸಹೋದರನ ಮೇಲೆ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ವಿಷಯದ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಹಾಗೂ ಅಂತ್ಯಕ್ರಿಯೆಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಐಟಿ ತನಿಖೆಯ ಹಿನ್ನೆಲೆ
ಮಾಹಿತಿಗಳ ಪ್ರಕಾರ, ಕಳೆದ ಒಂದು ತಿಂಗಳಿನಿಂದ ಆದಾಯ ತೆರಿಗೆ ಇಲಾಖೆ ಸಿ.ಜೆ. ರಾಯ್ ಅವರ ವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿತ್ತು. ಈ ತನಿಖೆಯಲ್ಲಿ ಐಟಿ ಅಧಿಕಾರಿ ಕೃಷ್ಣ ಪ್ರಸಾದ್ ಅವರ ಪಾತ್ರವಿದ್ದು, ಹೆಚ್ಚಿನ ವಿವರಗಳನ್ನು ಅವರಿಂದಲೇ ತಿಳಿಯಬೇಕಿದೆ ಎಂದು ಕುಟುಂಬ ಹೇಳಿದೆ. ಈ ಮೊದಲು ಕೂಡ ಐಟಿ ದಾಳಿಗಳು ನಡೆದಿದ್ದವು ಎಂಬ ಮಾಹಿತಿಯೂ ಹೊರಬಂದಿದೆ. ಈ ಕುರಿತು ಪ್ರತ್ಯೇಕ ದೂರು ನೀಡಬೇಕೇ ಎಂಬುದನ್ನು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಬಾಬು ರಾಯ್ ತಿಳಿಸಿದ್ದಾರೆ.
ಸತ್ಯ ಬಹಿರಂಗವಾಗಬೇಕು
ಈ ಪ್ರಕರಣದ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಬು ರಾಯ್, “ಸತ್ಯ ಹೊರಗೆ ಬರಬೇಕು ಅಷ್ಟೇ” ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ನಿಜಾಂಶ ತಿಳಿಸುವ ಹೊಣೆ ಸರ್ಕಾರದದ್ದೇ ಎಂದು ಹೇಳಿದ್ದಾರೆ. ಐಟಿ ವಿಚಾರದಲ್ಲಿ ಮಾತನಾಡಿದರೆ ರಾಜಕೀಯ ಬಣ್ಣ ಪಡೆಯುತ್ತದೆ ಎಂದೂ, ಇಂತಹ ಕಿರುಕುಳವನ್ನು ತಾವು ಖಂಡಿಸುತ್ತೇನೆ ಎಂದೂ ಅವರು ಸ್ಪಷ್ಟಪಡಿಸಿದ್ದರು.

