ಬಳ್ಳಾರಿ: ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡಿ ನಡುವೆ ಉಂಟಾದ ಘರ್ಷಣೆ ಓರ್ವ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಸಾವಿಗೆ ಕಾರಣವಾಗಿದೆ.
ಘಟನೆಯಲ್ಲಿ ‘ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರ ಬೆಂಬಲಿಗರ ಕಡೆಯಿಂದ ದಾಳಿ ನಡೆದಿದೆ’ ಎಂದು ಶಾಸಕ ಭರತ್ ರೆಡ್ಡಿ ಆರೋಪಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜನಾರ್ದನ ರೆಡ್ಡಿ ಮನೆ ಎದುರಿನ ಜಾಗದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಜಗಳ ಆರಂಭವಾಗಿದೆ. ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರ ಮನೆ ಎದುರು ರಸ್ತೆಯಲ್ಲಿ ಬ್ಯಾನರ್ ಕಟ್ಟಿಸಿದರು. ಈ ಕಾರಣಕ್ಕೆ ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದು, ನಂತರ ಕಲ್ಲು ತೂರಾಟ ನಡೆದಿದೆ.
ಘರ್ಷಣೆಗೆ ಸಂಬಂಧಿಸಿ ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರು ಆಧರಿಸಿ ಜನಾರ್ದನ ರೆಡ್ಡಿ ಅವರನ್ನು ಎ1 ಆರೋಪಿ ಮಾಡಲಾಗಿದೆ. ಸೋಮಶೇಖರ ರೆಡ್ಡಿ ಎ2, ಶ್ರೀರಾಮುಲು ಎ3, ಪಾಲಿಕೆ ವಿರೋಧ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ ಅವರನ್ನು ಎ4 ಮಾಡಲಾಗಿದೆ.

