ಉಪಯುಕ್ತ ಸುದ್ದಿ

ಸ್ಲೀಪರ್ ಬಸ್‌ಗಳಲ್ಲಿ ಬೆಂಕಿ ಅವಘಡ ತಡೆಗೆ ಹೊಸ ಮಾರ್ಗಸೂಚಿ: ರಾಜ್ಯದಲ್ಲಿ ಕಠಿಣ ಸುರಕ್ಷತಾ ನಿಯಮ ಜಾರಿ: ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಭೆಯಲ್ಲಿ ತೀರ್ಮಾನ

Share It

ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿರುವ ಸ್ಲೀಪರ್ ಬಸ್‌ಗಳ ಅಗ್ನಿ ಅವಘಡಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಾದ್ಯಂತ ಸಂಚರಿಸುವ ಎಲ್ಲ ಸ್ಲೀಪರ್ ಹಾಗೂ ಪ್ರವಾಸಿ ಬಸ್‌ಗಳಿಗೆ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸಲಾಗಿದೆ.

ಬೆಂಗಳೂರು ಸೇರಿ ಹಲವು ಕಡೆ ಎಸಿ ಸ್ಲೀಪರ್ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಅನೇಕ ಅಮೂಲ್ಯ ಜೀವಗಳು ಅಪಾಯಕ್ಕೆ ಸಿಲುಕಿವೆ. ಈ ಬೆಳವಣಿಗೆ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳು ಪ್ರಯಾಣಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿವೆ.

ಈ ಸೂಚನೆಗಳ ಅನುಸಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಸ್‌ಗಳ ವಿನ್ಯಾಸ, ನಿರ್ಮಾಣ ವಿಧಾನ ಹಾಗೂ ಸುರಕ್ಷತಾ ಸೌಲಭ್ಯಗಳ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಅದರಂತೆ, ಸ್ಲೀಪರ್ ಬಸ್‌ಗಳಲ್ಲಿ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.

  1. ಚಾಲಕರ ಆಸನದ ಹಿಂಭಾಗದಲ್ಲಿ ತುರ್ತು ನಿರ್ಗಮನ ದ್ವಾರ ತೆರೆಯುವ ವ್ಯವಸ್ಥೆ ಇರಬೇಕು.
  2. ಸ್ಲೀಪರ್ ಬರ್ತ್‌ಗಳಲ್ಲಿ ಸ್ಲೈಡರ್‌ ಓಪನ್ ಮಾಡುವ ವ್ಯವಸ್ಥೆ ಕಡ್ಡಾಯ.
  3. ಒಂದು ತಿಂಗಳೊಳಗೆ ಅಗ್ನಿ ಪತ್ತೆ ವ್ಯವಸ್ಥೆ ಅಳವಡಿಸಬೇಕು.
  4. ಕನಿಷ್ಠ 10 ಕೆಜಿ ತೂಕದ ಅಗ್ನಿ ಶಾಮಕ ಉಪಕರಣವನ್ನು ಬಸ್‌ನಲ್ಲಿ ಇರಿಸಬೇಕು.
  5. ಪ್ರಯಾಣಿಕರ ಸುರಕ್ಷತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ಫಿಟ್‌ನೆಸ್ ಪ್ರಮಾಣ ಪತ್ರ ನೀಡಲಾಗುತ್ತದೆ.
  6. ಬಸ್‌ ಕವಚ ನಿರ್ಮಾಣ ಸಂಸ್ಥೆಯ ಮಾನ್ಯತೆ ಪರಿಶೀಲನೆಯ ನಂತರವೇ ನೋಂದಣಿ.
  7. ಚಾಸಿಸ್‌ಗೆ ಅನಧಿಕೃತ ವಿಸ್ತರಣೆ ಮಾಡಲು ನಿರ್ಬಂಧ.
  8. ಅನುಮೋದಿತ ಪರೀಕ್ಷಾ ಸಂಸ್ಥೆಯಿಂದ ಕಡ್ಡಾಯ ಪ್ರಮಾಣ ಪತ್ರ ಪಡೆಯಬೇಕು.

ಈ ನಿಯಮಗಳ ಜಾರಿಗೆ ಮೂಲಕ ಸ್ಲೀಪರ್ ಬಸ್‌ಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಕಡಿಮೆ ಮಾಡಿ, ಪ್ರಯಾಣಿಕರ ಜೀವ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶ ಸರ್ಕಾರದದ್ದಾಗಿದೆ.


Share It

You cannot copy content of this page