ಸ್ಟಾರ್ ಚಂದ್ರು ಪರ ಮೋಹಕ ತಾರೆ ರಮ್ಯಾ ಪ್ರಚಾರ

Ramya
Share It

ಮಂಡ್ಯ (ಏ.17): ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪರ ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ.

ಏ.18 ಅಥವಾ 19ರಂದು ಮಂಡ್ಯ ನಗರದಲ್ಲಿ ರೋಡ್‌ ಶೋ ನಡೆಸಲಿರುವ ರಮ್ಯಾ ಕೈ ಅಭ್ಯರ್ಥಿ ಪರ ಮತಬೇಟೆಯಲ್ಲಿ ತೊಡಗುವರು. ನಂತರ ಬಳಿಕ ಪಾಂಡವಪುರ ವಿಧಾನಸಭಾ ಕ್ಷೇತ್ರದಲ್ಲೂ ರಮ್ಯಾ ಪ್ರಚಾರ ನಡೆಸಲಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಕೈ ಶಾಸಕ ಪಿ.ರವಿಕುಮಾರ್‌ ಹೇಳಿದರು.

2008 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷದಿಂದ ಮೊಟ್ಟಮೊದಲ ಬಾರಿಗೆ ಸಂಸದೆಯಾದ ನಟಿ ರಮ್ಯಾ ಅವು ಸಿನಿಮಾ ರಂಗಕ್ಕೆ ಕೆಲವು ವರ್ಷಗಳ ಕಾಲ ಗುಡ್ ಬೈ ಹೇಳಿದ್ದರು. ಆದರೆ ಬಳಿಕ
2014ರಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಅವರು ಜೆಡಿಎಸ್ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ವಿರುದ್ಧ ಪರಾಭವಗೊಂಡಿದ್ದರು.

ಮಂಡ್ಯದಲ್ಲಿ ಇಂದು ರಾಹುಲ್ ಮೇನಿಯಾ: ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಇಂದು ಏಪ್ರಿಲ್ 17 ರಂದು ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿ ಧೂಳೆಬ್ಬಿಸಿ ಹೋಗಿದ್ದಾಯ್ತು. ಅದಕ್ಕೆ ಪರ್‍ಯಾಯವಾಗಿ ಕಾಂಗ್ರೆಸ್ಸಿಗರು ರಾಹುಲ್ ಅವರನ್ನು ಮಂಡ್ಯಕ್ಕೆ ಕರೆತಂದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮಂಡ್ಯ ಕ್ಷೇತ್ರದಿಂದ ಅಖಾಡಕ್ಕಿಳಿದಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಟ್ಟಿಹಾಕುವುದಕ್ಕೆ ಕಾಂಗ್ರೆಸ್‌ನವರು ಶತಪ್ರಯತ್ನ ನಡೆಸುತ್ತಿದ್ದಾರೆ.

ಬುಧವಾರ ಬೆಳಗ್ಗೆ ನವ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಡಲಿರುವ ರಾಹುಲ್ ಗಾಂಧಿ ಮಧ್ಯಾಹ್ನ 1 ಗಂಟೆಗೆ ಮೈಸೂರಿಗೆ ಬಂದಿಳಿಯುವರು. ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೊರಟು ಮಧ್ಯಾಹ್ನ 1:30 ರ ಸಮಯಕ್ಕೆ ಮಂಡ್ಯ ನಗರದ ಕ್ರೀಡಾಂಗಣದಲ್ಲಿರುವ ಹೆಲಿಪಾಡ್‌ಗೆ ಬಂದಿಳಿಯುವರು.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ( ಸ್ಟಾರ್ ಚಂದ್ರು) ಪರ ರಾಹುಲ್ ಗಾಂಧಿಯವರು ಪ್ರಚಾರ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರಿಗೆ ವೇದಿಕೆ ಮೇಲೆ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಸಾಥ್ ನೀಡಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಲಿದ್ದಾರೆ.


Share It

You cannot copy content of this page