ಬೆಂಗಳೂರು: ಹಿರಿಯ ಸಾಹಿತಿ ಕಮಲಾ ಹಂಪನಾ ಅವರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕಮಲಾ ಹಂಪನಾ ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅಮೇರಿಕನ್ ಡಾಲರ್ಸ್ ಕಾಲನಿಯಲ್ಲಿರುವ ಪುತ್ರಿ ಆರತಿ ಮನೆಯಲ್ಲಿ ವಾಸವಾಗಿದ್ದರು. ಪತಿ ಸಾಹಿತಿ ಹಂಪ ನಾಗರಾಜಯ್ಯ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಹೀಗಾಗಿ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.
60 ವರ್ಷಗಳ ಸುದೀರ್ಘ ಸಾಹಿತ್ಯ ಸೇವೆಯಲ್ಲಿ ಅವರು, ಅಧ್ಯಯನ, ಅದ್ಯಾಪನ, ಲೇಖನ, ಭಾಷಣ ಮತ್ತು ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. 60 ಪ್ರಕಟಿತ ಕೃತಿಗಳು ಅವರ ಸಾಹಿತ್ಯ ಕ್ಷೇತ್ರದ ಸಾಧನೆಗೆ ಸಾಕ್ಷಿಯಾಗಿವೆ. ನಾಟಕ, ಕತೆಗಳು, ಮತ್ತು ಆದುನಿಕ ವಚನಗಳನ್ನೊಳಗೊಂಡ ಬಿಂದಲಿ, ಬಯಲು ಕೃತಿಗಳು ಜನಮನ ಸೆಳೆದಿದ್ದವು.
ಕಮಲಾ ಹಂಪನಾ ಅವರು, ಮೂಡಬಿದಿರೆಯಲ್ಲಿ ನಡೆದ 71 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸರಕಾರ ನೀಡುವ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯನ್ನು ಪಡೆದಿದ್ದರು.
ರಾಜಾನಿನಗರದ ನಿವಾಸದಲ್ಲಿ ಅಂತಿಮ ದರ್ಶನ ನಡೆಯುತ್ತಿದ್ದು, 10 ಗಂಟೆಯ ನಂತರ ರವೀಂದ್ರ ಕಲಾಕ್ಷೇತ್ರದ ಸಂಸ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನಡೆಸದಿರಲು ತೀಋ್ಮಾನಿಸಿರುವ ಅವರ ಕುಟುಂಬ, ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಿರುವುದು ಗಮನಾರ್ಹ ಅಂಶವಾಗಿದೆ.
