ಹೊಸಕೋಟೆ: ಹೊಸಕೋಟೆ ಬಳಿ ಸಂಭವಿಸಿದ ಭೀಖರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಹೊಸಕೋಟೆ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹೊಸಕೋಟೆ ಸಮೀಪದ ಎಂ.ಸತ್ಯವರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ಮತ್ತು ಎಕ್ಸ್ಸ್ಯುವಿ ವಾಹನದ ನಡುವೆ ಸಂಭವಿಸಿದ ಡಿಕ್ಕಿಯಿಂದ ಏಳು ಜನರು ಮೃತಪಟ್ಟಿದ್ದಾರೆ. ಈ ವೇಳೆ ಮತ್ತೊಂದು ಬೈಕ್‌ಗೂ ಕೂಡ ಕಾರು ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.
ಕಾರಿನಲ್ಲಿದ್ದ ಆರು ಜನರು ಹಾಗೂ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದವರೆಲ್ಲರೂ ಕೊತ್ತನೂರು ನಿವಾಸಿಗಳು ಎಂದು ಹೇಳಲಾಗಿದ್ದು, ಇವರು ದೇವನಹಳ್ಳಿ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಸರ್ವೀಸ್ ರಸ್ತೆಗೆ ಕ್ಯಾಂಟರ್ ಉರುಳಿಬಿದ್ದಿದ್ದು, ಅದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಸ್ಥಳಕ್ಕೆ ಹೊಸಕೋಟೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೊಸಕೋಟೆ ಸರಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಿದ್ದಾರೆ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

