ಬೆಂಗಳೂರು : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೇವರಾಜೇಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ. ಇಂದು ದೂರು ನೀಡಿದ್ದ ಸಂತ್ರಸ್ತೆ ಮಹಿಳೆ ವಿರುದ್ಧ ದೇವರಾಜೇಗೌಡ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ದೇವರಾಜೇಗೌಡ ಹಿರಿಯೂರು ಠಾಣೆ ಪೊಲೀಸರ ವಶದಲ್ಲಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ವಿಚಾರದಲ್ಲಿ ವಕೀಲ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಕೇಸ್ನ ವಿಚಾರಗಳು ಬಹಿರಂಗವಾಗಿವೆ. ತಮ್ಮ ನಿವೇಶನವೊಂದರ ಮಾರಾಟ ವಿಚಾರವಾಗಿ ವಕೀಲ ದೇವರಾಜೇಗೌಡ ಸಂಪರ್ಕ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸೈಟ್ ಮಾರಾಟ ಮಾಡಿಸಿಕೊಡುವ ನೆಪದಲ್ಲಿ ತನ್ನನ್ನು ಲೈಂಗಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಹೆದರಿಸಿ ಬೆದರಿಸಿ ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿಡಿಯೋ ಕಾಲ್ ಮಾಡಿ ತನ್ನ ಖಾಸಗಿ ಅಂಗಾಂಗ ತೋರಿಸಿ ಪ್ರಚೋದನೆಗೆ ಯತ್ನಿಸಿದ್ದಾರೆ. ಹೀಗಾಗಿ ಮಹಿಳೆ ದೂರು ಆಧರಿಸಿ ಹೊಳೆನರಸೀಪುರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆ ಮೇಲಿನ ದೌರ್ಜನ್ಯ ಆರೋಪ ಕೇಸ್ನಲ್ಲಿ ಜಾಮೀನಿಗಾಗಿ ದೇವರಾಜೇಗೌಡ ಮೇ 8ರಂದು ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 15 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.
ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಆರೋಪ ಪ್ರತ್ಯಾರೋಪದ ನಡುವೆ ದೇವರಾಜೇಗೌಡ ಮೇಲಿನ ಆರೋಪ ಪ್ರಕರಣ ತೀವ್ರ ಚರ್ಚೆ ಹುಟ್ಟು ಹಾಕಿದೆ. ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ಹನಿಟ್ಯಾಪ್ ಆರೋಪದಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ದ ದೂರು ನೀಡಿದ್ದ ಮಹಿಳೆಯಿಂದ ಹನಿಟ್ರ್ಯಾಪ್ ಎಂದು ದೇವರಾಜೇಗೌಡ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.