‘ಕೆರೆಗೆ ಹಾರ ‘ಪ್ರಸಿದ್ಧ ಜಾನಪದ ಕಥನ ಕವನ. ಊರ ಗೌಡ ಕೆರೆ ಕಟ್ಟಿಸುತ್ತಾನೆ. ಅಲ್ಲಿ ಒಂದು ಹನಿಯೂ ನೀರು ಬರುವುದಿಲ್ಲ. ಕೆರೆತುಂಬಿ ನಳನಳಿಸಲು ಸೊಸೆಯಾಗಿರುವ ಹೆಣ್ಣು ನರ ಬಲಿ ಕೊಡಬೇಕು ಎಂದು ಜ್ಯೋತಿಷಿ ಪರಿಹಾರ ಹೇಳುತ್ತಾನೆ. ಕುಟುಂಬದ ಕಿರಿಯ ಸೊಸೆಯನ್ನು ಬಲಿ ಕೊಡುವ ನಿರ್ಧಾರವಾಗುತ್ತದೆ. ಸಂಗತಿ ಪರೋಕ್ಷವಾಗಿ ಸೊಸೆಗೆ ತಿಳಿಯುತ್ತದೆ. ಆಕೆ ಅನುಭವಿಸುವ ಸಂಕಟ,ತಲ್ಲಣ,ತಳಮಳ ಅಷ್ಟಿಷ್ಟಲ್ಲ . ಗೆಳತಿಯರ ಮುಂದೆ “ಕೆರೆಗೆ ನನ ಹಾರ ಕೊಡ್ತಾರಂತೆ “ಎಂದು ಬಿಕ್ಕುತ್ತಾಳೆ. “ಕೊಟ್ಟರೆ ಕೊಡಲೇಳು, ಇಟ್ಟಂಗ ಇರಬೇಕು “ಎಂದು ಗೆಳತಿಯರು ಸ್ಥಾಪಿತ ಮೌಲ್ಯಗಳ ದರ್ಶನ ಮಾಡಿಸುತ್ತಾರೆ. ಬದುಕಿ ಉಳಿಯುವ ಎಲ್ಲ ಮಾರ್ಗಗಳು ಮುಚ್ಚಿಬಿಡುತ್ತವೆ. ಸೊಸೆಯನ್ನು ಕೆರೆಗೆ ಇಳಿಸಿ ಹಾರವಾಗಿಸುತ್ತಾರೆ. ಆಕೆ ಸಾಯುತ್ತಾಳೆ.
ಸಂವಿಧಾನ ನೀಡಿದ ಪುರುಷ ಮತ್ತು ಮಹಿಳೆಯರ ಸಮಾನತೆಯ ಹಕ್ಕನ್ನು ರಾಜಕೀಯ ಪಕ್ಷಗಳು ನಿರರ್ಥಕ ಗೊಳಿಸುತ್ತಿರುವ ಈ ಸಂದರ್ಭದಲ್ಲಿಮಹಿಳೆಯರೇ ಮುಂದಾಗಿ ರಾಜಕೀಯ ಪಕ್ಷ ಕಟ್ಟಿ ಸ್ಪರ್ಧೆಗೆ ಇಳಿಯಬೇಕು ಎಂದು ವಾಚಕರ ವಾಣಿಯಲ್ಲಿ (ಪ್ರಜಾವಾಣಿ ಏಪ್ರಿಲ್ 24) ಮಾಲತಿ ಪಟ್ಟಣಶೆಟ್ಟಿ ಅವರು ಬರೆದ ‘ಕಟ್ಟಬೇಕಿದೆ ಮಹಿಳಾ ಪಕ್ಷ’ ಪತ್ರ ಓದಿದಾಗ ಈ ಕಥನ ಕವನ ನೆನಪಾಗಿ ಕರುಳು ಹಿಂಡಿದಂತಾಯಿತು.
ದೇಶದ ಒಟ್ಟು ಮತದಾರರಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ನ್ಯಾಯ ಸಮ್ಮತ ಸಮಪಾಲು ನೀಡುತ್ತಿಲ್ಲ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ಮಹಿಳೆಯರ ಸ್ಪರ್ಧೆಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೂಗು ಇದೆ,ಆದರೆ ಅದು ಗರ್ಜನೆಯಾಗಿ ಕೇಳಿಸುತ್ತಿಲ್ಲ.
ಅನುಕಂಪ ಮತ್ತು ಮೀಸಲಾತಿಗೆ ಕಾಯುತ್ತ ಕುಳಿತುಕೊಳ್ಳುವುದು ನೋವಿನ ಸಂಗತಿ. ಮಹಿಳೆಯರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಿ ತಮ್ಮ ಅಸ್ಮಿತೆ ಕಾಪಾಡುವ ಮಹಿಳಾ ರಾಜಕೀಯ ಪಕ್ಷ ಕಟ್ಟಬೇಕು.
ಮಹಿಳಾ ಮಂಡಳ, ಮಹಿಳಾ ಸಾಹಿತ್ಯ ಸಂಘಟನೆ,ಮಹಿಳಾ ಸಮಾಜ, ಕೃಷಿ ಮಹಿಳಾ ಸಂಘಗಳು ಅಸ್ತಿತ್ವದಲ್ಲಿವೆ.ಇವುಗಳನ್ನು ಪಕ್ಷ ಕಟ್ಟುವುದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು.
ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ದೊಡ್ಡದಾಗಿ ಬೆಳೆದಿದೆ . ಅವರುಉತ್ಸಾಹಿಗಳು ಮತ್ತು ತಮ್ಮ ಹಕ್ಕುಗಳ ಬಗ್ಗೆ ಅರಿವಿದ್ದವರು ಆಗಿದ್ದಾರೆ.ಅವರನ್ನು ಪಕ್ಷ ಕಟ್ಟುವ ಸಾಹಸಕ್ಕೆ ಹುರಿದುಂಬಿಸಬೇಕು. ಮಹಿಳೆಯರು ಮೂಲತಃ ಛಲವುಳ್ಳವರು. ಅಂತರ್ಜ್ಞಾನಿಗಳು.ಅದು ಈಗ ಕ್ರಿಯೆ ಆಗಬೇಕು.
“ಎಲ್ಲ ಮಹಿಳೆಯರು ಶೋಷಿತರು, ಮಹಿಳೆಯರೆಲ್ಲರೂ ದಲಿತರೇ “ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ವಿಪರೀತ ಶೋಷಣೆ ಅನುಭವಿಸುವ ಕಾರ್ಮಿಕರ, ದುಡಿಮೆಗಾರರ, ಕೃಷಿಕರ, ಇನ್ನೊಂದು ಬಹುಸಂಖ್ಯಾತರ ವರ್ಗ ದೇಶದಲ್ಲಿದೆ.. ಅವರನ್ನು ಒಳಗೊಂಡರೆ ಮಹಿಳಾ ಪಕ್ಷಕ್ಕೆ ಖಂಡಿತ ಹೆಚ್ಚಿನ ಬಲ ಬರುತ್ತದೆ. ಈ ಬಗ್ಗೆ ಕೂಡ ಚಿಂತನೆ ನಡೆಯಬೇಕು.
ಪ್ರಸಕ್ತ 17ನೇ ಲೋಕಸಭೆಯಲ್ಲಿ ಈಗಿರುವ 543 ಸದಸ್ಯರಲ್ಲಿ 78 ಮಹಿಳಾ ಸದಸ್ಯರಿದ್ದಾರೆ. ಹಿಂದಿನ ಎಲ್ಲಾ ಲೋಕಸಭೆಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ಇನ್ನೂ ಕಡಿಮೆಯಾಗಿತ್ತು. ರಾಜ್ಯಸಭೆಯಲ್ಲಿಯೂ ತಾರತಮ್ಯ ಎದ್ದು ಕಾಣುತ್ತದೆ. ಪ್ರಸಕ್ತ 224 ರಾಜ್ಯಸಭಾ ಸದಸ್ಯರಲ್ಲಿ 24 ಮಹಿಳೆಯರು ಮಾತ್ರ ಇದ್ದಾರೆ. ದೇಶದ ವಿಧಾನಸಭೆಗಳಲ್ಲಿಯೂ ಚಿತ್ರ ಭಿನ್ನವಾಗಿಲ್ಲ . ನೆಪಕ್ಕೆ ಒಬ್ಬರು ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ಸಿಗುತ್ತದೆ.
ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆ,ದಿವ್ಯಾಂಗರಿಗೆ ಮತ್ತು ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗಲು ಆಸನ ನಿಗದಿ ಪಡಿಸಿ ಫಲಕಗಳನ್ನು ಬರೆದಿರುತ್ತಾರೆ. ಬಸ್ಸುಗಳಲ್ಲಿ ಸ್ಥಳ ನಿಗದಿಪಡಿಸಿ ತಮಗೆ ಕುಳಿತುಕೊಳ್ಳುಲು ನೆರವಾಗುವುದು ಬೇಡ. ಇದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ನಾವು ಹೋರಾಟ ಮಾಡಿಯೇ ಸ್ಥಳ ಹಿಡಿದುಕೊಳ್ಳುತ್ತೇವೆ ಎಂದು ಕೇರಳದಲ್ಲಿ ಕೆಲವು ವರ್ಷಗಳ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದರು . ಸಾಹಿತಿ ವೀಣಾ ಬನ್ನಂಜೆ ಮಂಗಳೂರಿನಲ್ಲಿ ಇದೇ ಹೋರಾಟವನ್ನು ಮಾಡಿ ಪತ್ರಿಕೆಗಳಲ್ಲಿಯೂ ಬರೆದು ಗಮನ ಸೆಳೆದಿದ್ದರು. ಹಕ್ಕು ಪಡೆಯುವುದಕ್ಕೆ ಅನುಕಂಪ ಮೀಸಲಾತಿ ಪರಿಹಾರವಲ್ಲ,ಹೋರಾಟವೇ ಸಮರ್ಪಕ ಮಾರ್ಗಎಂದು ಈ ಮಹಿಳೆಯರು ನಡೆಸಿದ ಪ್ರತಿಭಟನೆ ಬೆಳಕಿನ ಗೆರೆಯಂತೆ ಕಾಣುತ್ತದೆ.
ಮಹಿಳೆಯರು ಶಿಕ್ಷಣ ರಂಗದಲ್ಲಿ, ಪರಿಶ್ರಮದ ದುಡಿಮೆಯಲ್ಲಿ , ಕುಟುಂಬ ನಿರ್ವಹಣೆಯಲ್ಲಿ ಎಲ್ಲಕ್ಕಿಂತಲೂ ಮಿಗಿಲಾಗಿ ಸಹನೆ ಮತ್ತು ಜಾಣ್ಮೆಯಿಂದ ಬಾಳು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಅವರು ರಾಜಕೀಯ ಪ್ರಬಲ ಶಕ್ತಿಯಾಗಿ ಬೆಳೆದು ನಿಂತಿಲ್ಲ . ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರ ವೇದಿಕೆ ಮೇಲೆ ನಿಂತು ಸ್ತ್ರೀ ಸಂಕುಲದ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಮಾತುಗಳನ್ನು ಸೂಕ್ಷ್ಮತೆ ಕಳೆದುಕೊಂಡು ಮಾತನಾಡುತ್ತಿದ್ದಾರೆ . ಅವರಿಗೆ ಮಹಿಳೆಯರು ರಾಜಕೀಯ ಮೂಲಕವೇ ಉತ್ತರ ಕೊಡುವ ವೇದಿಕೆ ಸೃಷ್ಟಿಯಾಗಬೇಕು.
ರಾಜಕೀಯ ಪುರುಷ ಕೇಂದ್ರಿತ ಅಖಾಡ ಎಂಬ ಕಟ್ಟಳೆ ಕಟ್ಟಲಾಗಿದೆ. ಮಹಿಳೆಯರು ಧೈರ್ಯವಾಗಿ ಈ ಹುಸಿ ಕಟ್ಟಳೆ ಒಡೆಯಬೇಕಾಗಿದೆ.
– ಮಲ್ಲಿಕಾರ್ಜುನ ಹೆಗ್ಗಳಗಿ,
9379090059