ರಾಜಕೀಯ ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧ ‘ಸಿದ್ಧ’ವಾಗಿದೆಯಾ ‘ಜಿಲೇಬಿ’ ಫಾರ್ಮುಲಾ !

Share It


ಹಿಂದುಳಿದ ವರ್ಗದವ 2 ನೇ ಬಾರಿ ಸಿಎಂ ಆದ್ರೆ ಉರಿ
ಈ ಮಾತಿನಿಂದೆ ಇತ್ತಾ ಜಿಲೇಬಿ ಕೈವಾಡದ ಮರ್ಮ ?
ವೈಟ್ ಪೇಪರ್ ವಿಶೇಷ
ಬೆಂಗಳೂರು
: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈತ್ರಿ ಪಕ್ಷಗಳು ಮಾರಾಮಾರಿ ಶುರು ಮಾಡಿಕೊಂಡಿವೆ. ಹಗಲು ರಾತ್ರಿ ಹೋರಾಟದ ಮೂಲಕ ಸಿದ್ದರಾಮಯ್ಯ ಹೆಗಲೇರಿಕೊಂಡಿದ್ದು, ರಾಜೀನಾಮೆ ಕೊಡೋವರೆಗೂ ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿವೆ.

ಭ್ರಷ್ಟಾಚಾರದ ವಿರುದ್ಧ ಯಾವುದೇ ವಿರೋಧ ಪಕ್ಷವಾಗಲೀ ಹೋರಾಟ ಮಾಡುವುದು ಪ್ರಜಾಪ್ರಭುತ್ವದ ಪ್ರಕಾರ ಸರಿಯಾದ ನಡೆಯೇ. ಆದರೆ, ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಹೋರಾಟ ಬೇರೆಯದ್ದೆ ಆಯಾಮ ಪಡೆದುಕೊಂಡಿದೆ ಎನ್ನುತ್ತವೆ ರಾಜಕೀಯ ಮೂಲಗಳು.

ಅಷ್ಟಕ್ಕೂ ಆ ಹೊಸ ಆಯಾಮವೇನು ಎಂಬುದನ್ನು ನೋಡಬೇಕಾದರೆ, ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ಹೇಳಿದ ಒಂದು ಹೇಳಿಕೆಯನ್ನು ಗಮನಿಸಬೇಕು. ಅದೇನೆಂದರೆ, ” ಹಿಂದುಳಿದ ವರ್ಗದವನೊಬ್ಬ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ” ಎಂಬುದು.

ಸಿದ್ದರಾಮಯ್ಯ ಅವರ ಈ ಹೇಳಿಕೆಯೇ ಸಿದ್ದರಾಮಯ್ಯ ವಿರುದ್ಧ ಅಹಿಂದ ಹೊರತುಪಡಿಸಿದ ಒಂದು ಸಮೂಹ ಕೆಲಸ ಮಾಡುತ್ತಿದೆ ಎಂಬುದರ ಸೂಚಕದಂತಿತ್ತು. ಅಂತಹ ಮಾಹಿತಿಯನ್ನಿಟ್ಟಯಕೊಂಡೇ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಸಿಎಂ ಎಂಬ ಹೇಳಿಕೆಯ ದಾಳ ಬೀಳಿಸಿದ್ದರು. ಆದರೆ, ಅದೇನು ಅಷ್ಟೊಂದು ವರ್ಕೌಟ್ ಆದಂತೆ ಕಾಣುತ್ತಿಲ್ಲ.

ಅಷ್ಟಕ್ಕೂ ಅಹಿಂದ ಹೊರತುಪಡಿಸಿದ ಆ ಒಂದು ಸಮೂಹ ಯಾವುದು ಎಂಬುದು ಎಲ್ಲರ ಕುತೂಹಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಜಿಲೇಬಿ ಫೈಲ್ ಮೂಲಕ ಕುಮಾರಸ್ವಾಮಿ ಒಂದು ಹೊಸ ಪದ ಪ್ರಯೋಗ ಮಾಡಿದ್ದರು. ಇದೀಗ ಆ ಜಿಲೇಬಿ ಸಮುದಾಯಗಳು ಸಿದ್ದರಾಮಯ್ಯ ಅವರ ಅಧಿಕಾರ ಮೊಟುಕುಗೊಳಿಸಲು ಪ್ರಯತ್ನಿಸುತ್ತಿವೆ ಎಂಬ ಮಾತು ಕೇಳಿಬಂದಿದೆ.

ಈ ಜಿಲೇಬಿ ಸಮುದಾಯ ಕೇವಲ ಬಿಜೆಪಿ, ಜೆಡಿಎಸ್ ನಲ್ಲಿ ಮಾತ್ರ ಇಲ್ಲ. ಕಾಂಗ್ರೆಸ್ ನಲ್ಲಿಯೂ ಇದ್ದು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಹೊರಗಿಡಲು ಸಿಕ್ಕಿರುವ ಹಗರಣಗಳ ಅಸ್ತ್ರವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.

ಏನಿದು ಜಿಲೇಬಿ ಪದ ಪ್ರಯೋಗ ?
ಅಷ್ಟಕ್ಕೂ ಜಿಲೇಬಿ ಪದ ಬಹುತೇಕರಿಗೆ ಅರ್ಥವಾಗುವುದಿಲ್ಲ. ಆದರೆ, ಹತ್ತಿರದಿಂದ ರಾಜಕೀಯ ಗಮನಿಸುವವರಿಗೆ ಇದರ ಅರಿವು ಇರುತ್ತದೆ. ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಜಿಲೇಬಿ ಪೈಲ್ ಗಳು ಬಂದರೆ ತಡೆ ಹಿಡಿಯುತ್ತಾರೆ ಎಂದು ಎಚ್.ಡಿ.ಕೆ ಆರೋಪ ಮಾಡಿದ್ದರು. ಜಿಲೇಬಿ ಎಂದರೇನು ಎಂಬುದನ್ನು ಅವರೇ ಹೇಳಿದ್ದರು. ಅವರ ಪ್ರಕಾರ ಜಿಲೇಬಿ ಎಂದರೆ, ಗೌಡ, ಲಿಂಗಾಯತ ಮತ್ತು ಬ್ರಾಹ್ಮಣ. ಜಿ.ಎಲ್. ಬಿ ಎಂಬುದನ್ನು ಜಿಲೇಬಿ ಕೋಡ್ ವರ್ಲ್ಡ್ ಮೂಲಕ ಬಳಸಲಾಗುತ್ತಿದೆ ಎಂಬುದು ಅವರ ಆರೋಪವಾಗಿತ್ತು.

ಈಗೇಕೆ ಜಿಲೇಬಿ ಕೋಪ ?
ಸಿದ್ದರಾಮಯ್ಯ ಅವರ ಮೇಲೆ ಈ ಜಿಲೇಬಿ ಮುನಿಸು ಈಗೇಕೆ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಮೊದಲ ಕಾರಣ ಸಿದ್ದರಾಮಯ್ಯ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಬಿಡುತ್ತಿಲ್ಲ. ಹೀಗಾಗಿ, ಅವರನ್ನು ಕೆಳಗಿಳಿಸಲು ಇಂತಹ ಭ್ರಷ್ಟಾಚಾರದ ಅಸ್ತ್ರಗಳೇ ಸೂಕ್ತ. ಇದನ್ನು ಪ್ರಯೋಗಿಸಿ ಕಳೆಗಿಳಿಸಿದರೆ ಡಿಕೆಶಿ ಹಾದಿ ಸುಗಮ ಎಂಬುದು ಕಾಂಗ್ರೆಸ್ ನೊಳಗೆ ಇರುವ ಒಕ್ಕಲಿಗ ನಾಯಕರ ಅಭಿಪ್ರಾಯ.

ಇನ್ನು ಡಿಕೆಶಿ ಕಡು ವಿರೋಧಿಯಾದರೂ ಅಧಿಕಾರದ ವಿಚಾರ ಬಂದಾಗ ನಮ್ಮವರಿಗೆ ಇರಲಿ ಎಂಬ ಮನೋಭಾವ ಕುಮಾರಸ್ವಾಮಿ ಅವರಿಗಿದೆ. ಹೀಗಾಗಿ, ಜೆಡಿಎಸ್ ಕೂಡ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡುತ್ತಿದೆ. ಆರ್.ಎಸ್.ಎಸ್. ಪ್ರಭಾವಳಿಯ ಬ್ರಾಹ್ಮಣ ಸಮುದಾಯ ಪ್ರಾಶಸ್ತ್ಯದ ಬಿಜೆಪಿ ಜತೆ ಸೇರಿ ಸಿದ್ದರಾಮಯ್ಯ ಅವರನ್ನು ಹಣಿಯುತ್ತಿದ್ದರೆ, ಅದಕ್ಕೆ ಎಚ್.ಡಿಕೆ ಸಾಥ್ ಇದೆ ಎನ್ನಲಾಗುತ್ತಿದೆ.

ಇನ್ನು ಲಿಂಗಾಯತ ಸಮುದಾಯದ ಕೆಲ ಶಾಸಕರು ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ಪ್ರಭಾವಳಿ ಕಾರಣ ಎನ್ನಲಾಗುತ್ತಿದೆ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಆದರೆ, ಅದರಲ್ಲಿ ಅದೆಷ್ಟು ಮಟ್ಟಿಗೆ ಸಕಾರವಾಗಲಿದೆ ಕಾದು ನೋಡಬೇಕಿದೆ.


Share It

You cannot copy content of this page