ಸುದ್ದಿ

ವಾಲ್ಮೀಕಿ ನಿಗಮದ ಹಣದಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿ: ಎಸ್ಐಟಿಯಿಂದ 10 ಕೆ.ಜಿ ಚಿನ್ನದ ಬಿಸ್ಕೆಟ್ ಜಪ್ತಿ

Share It

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಸಿಐಡಿ ಎಸ್​ಐಟಿ ತಂಡದಿಂದ ತನಿಖೆ ಚುರುಕುಗೊಂಡಿದೆ.

ಈ ಹಗರಣದ ಪ್ರಧಾನ ಆರೋಪಿ ಸತ್ಯನಾರಾಯಣ ವರ್ಮಾನ ಮನೆಯಲ್ಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಬರೋಬ್ಬರಿ 10 ಕೆ.ಜಿ‌ ಚಿನ್ನದ ಬಿಸ್ಕೆಟ್​ಗಳನ್ನು ಎಸ್ಐಟಿ ತಂಡ ವಶಕ್ಕೆ ಪಡೆದಿದೆ ಎಂದು ಎಸ್​ಐಟಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಆರೋಪಿ ಸತ್ಯನಾರಾಯಣ್ ವರ್ಮಾ ವಾಲ್ಮೀಕಿ ಹಗರಣದ ಹಣದಲ್ಲೇ ಚಿನ್ನ ಖರೀದಿಸಿದ್ದ. ಎಸ್ಐಟಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದ್ದ ವೇಳೆ 15 ಕೆ.ಜಿ ಗೋಲ್ಡ್ ಕೊಡುವುದಾಗಿ ಹೇಳಿದ್ದ. ಅದರಂತೆ ತನ್ನ ಹೈದರಾಬಾದ್ ಪ್ಲಾಟ್ ನಲ್ಲಿ 10 ಕೆ.ಜಿ.ಚಿನ್ನದ ಗಟ್ಟಿ ಇಟ್ಟಿರುವುದನ್ನು ತೋರಿಸಿದ್ದಾನೆ.

ಉಳಿದ ಚಿನ್ನದ ಬಿಸ್ಕೆಟ್ ಗಾಗಿ ಎಸ್​ಐಟಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಸತ್ಯನಾರಾಯಣ ವರ್ಮಾ ಇದುವರೆಗೂ ವಾಲ್ಮೀಕಿ ಹಗರಣದ ಹಣದಿಂದ ಬರೋಬ್ಬರಿ 35 ಕೆ.ಜಿ.ಚಿನ್ನದ ಬಿಸ್ಕೆಟ್ ಖರೀದಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಹೈದರಾಬಾದ್​ನಲ್ಲಿ ಎಸ್​ಐಟಿ ತಂಡ ಸತ್ಯನಾರಾಯಣ್ ವರ್ಮ ಹಿಡಿದಿದ್ದೇ ರೋಚಕವಾಗಿದೆ. ಇನ್ನು ಎಸ್​ಐಟಿ ತಂಡ ಒಂದು ವಾರ ಸತತ ಹುಡುಕಾಟ ನಡೆಸಿದರೂ ಎಲ್ಲಿಯೂ ಸತ್ಯನಾರಾಯಣ್ ವರ್ಮಾ ಪತ್ತೆಯಾಗಿರಲಿಲ್ಲ.

ಬಳಿಕ ಆತನ ಆಪ್ತ ವಲಯದಲ್ಲಿದ್ದವರನ್ನು ಲಾಕ್ ಮಾಡಿ ಮಾಸ್ಟರ್ ಪ್ಲಾನ್ ಮಾಡಿ ಅರೆಸ್ಟ್ ಮಾಡಲಾಯಿತು. ಸತ್ಯನಾರಾಯಣ್ ವರ್ಮಾನನ್ನು ಬಂಧಿಸುವ ವೇಳೆಗೆ ಎಲ್ಲಾ ಹಣ, ಚಿನ್ನ ಬೇರೆ ಬೇರೆ ಕಡೆ ಅಡಗಿಸಲಾಗಿತ್ತು.

ಬೆಂಗಳೂರಿಗೆ ಕರೆತಂದು ವರ್ಮಾನ ವಿಚಾರಣೆ ನಡೆಸಿದಾಗ ಹಣ ಹಾಗೂ ಪ್ಲಾಟ್ ಖರೀದಿ ಬಗ್ಗೆ ಬಾಯ್ಬಿಟ್ಟಿದ್ದ. ನಂತರ ಎಸ್​ಐಟಿ ತಂಡ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಹೈದರಾಬಾದ್​ನಲ್ಲಿರುವ ವರ್ಮಾನ ಫ್ಲಾಟ್ ಶೋಧ ಕಾರ್ಯ ನಡೆಸಿದ್ದಾರೆ.

ಹೈದರಾಬಾದ್ ಸೀಮಾಪೇಟೆ, ಮೀಯಾಪುರದಲ್ಲಿ ವಾಸವಿ ಬಿಲ್ಡರ್ಸ್​ನಲ್ಲಿ ತಲಾ 2 ಫ್ಲಾಟ್ ಸೇರಿ ಒಟ್ಟು 11 ಫ್ಲಾಟ್ ಖರೀದಿಸಿರುವ ಬಗ್ಗೆ ಎಸ್​ಐಟಿಗೆ ಮಾಹಿತಿ ಸಿಕ್ಕಿದೆ. ಹೈದರಾಬಾದ್ ಫ್ಲಾಟ್​ನಲ್ಲಿ 8 ಕೋಟಿ ರೂ. ಹಣ ಅಡಗಿಸಿಟ್ಟಿದ್ದು ಬ್ಯಾಗ್ ನಲ್ಲಿ 8 ಕೋಟಿ ರೂ. ಹಣ ಸಿಕ್ಕಿದೆ. ಹಣ ಎಣಿಕೆ ಮಿಷನ್ ತರಿಸಿ ಹಣ ಎಣಿಕೆ ಮಾಡಿ ಜಪ್ತಿ ಮಾಡಲಾಗಿದೆ.


Share It

You cannot copy content of this page