ಬೆಂಗಳೂರು: ಸಾರ್ವಜನಿಕ ವಲಯದ ಭಾರಿ ಆಕ್ರೋಶದ ನಡುವೆಯೂ ನಿರೀಕ್ಷೆಯಂತೆಯೇ ಕೊಲೆ ಪ್ರಕರಣದಲ್ಲೂ ರಾಜಕೀಯ ಪುಢಾರಿಗಳು ದರ್ಶನ್ ಪರ ನಿಲ್ಲುವ ಕೆಲಸ ಮಾಡುತ್ತಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿದ್ದೇ ಪೊಲೀಸರು ತೆಗೆದುಕೊಂಡ ದಿಟ್ಟ ಹೆಜ್ಜೆಗೆ ನಿದರ್ಶನ. ಇಂತಹ ಪ್ರಕರಣದಲ್ಲಿ ಪೊಲೀಸರೇ, ರಾಜೀಯಾಗ್ತಾರೆ ಅನ್ನೋ ಆರೋಪವಿತ್ತು. ಆದರೆ, ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದ ಪೊಲೀಸರು ಸಾರ್ವಜನಿಕ ವಲಯದಲ್ಲಿ ಕರ್ನಾಟಕ ಪೊಲೀಸರ ಖದರ್ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿದ್ದರು. ಅಂತೆಯೇ ಈವರೆಗಿನ ಎಲ್ಲ ಬೆಳವಣಿಗೆಯಲ್ಲಿ ಪೊಲೀಸರು ನಡೆದುಕೊಂಡಿದ್ದಾರೆ.
ಈ ನಡುವೆ ರಾಜ್ಯದ ಜನರಲ್ಲಿ ರಾಜಕಾರಣಿಗಳ ಬಗ್ಗೆಯೊಂದು ಅನುಮಾನವಿತ್ತು. ಚುನಾವಣೆ ಸಂದರ್ಭದಲ್ಲಿ ದರ್ಶನ್ ಸ್ಟಾರ್ ಗಿರಿ ಬಳಸಿ ಕೊಂಡಿರುವ ಕೆಲವು ರಾಜಕಾರಣಿಗಳು ಅವರ ಪರ ಪೊಲೀಸರ ಮೇಲೆ ಒತ್ತಡ ತಂದು ಅವರನ್ನು ಪ್ರಕರಣದಿಂದ ಹೊರಗಿಡುವ ಪ್ರಯತ್ನ ಮಾಡಬಹುದು ಎಂಬ ಅನುಮಾನವಿತ್ತು. ಈಗ ಅದರಂತೆಯೇ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನ ಕೆಲವ ಹಾಲಿ ಮಂತ್ರಿಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನ ಕೆಲವು ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರು, ದರ್ಶನ್ ಅವರನ್ನು ಪ್ರಕರಣದಲ್ಲಿ ಈಗಲೇ ಇಷ್ಟೊಂದು ನಿಷ್ಠುರವಾಗಿ ನಡೆಸಿಕೊಳ್ಳುವುದು ಬೇಡ. ಅವರಿಗೆ ಕೂಡ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಆಕ್ರೋಶ ಸರಕಾರದ ಮೇಲೆ ತಿರುಗಲಿದೆ. ಹೀಗಾಗಿ, ಅವರನ್ನು ಆದಷ್ಟು ಪ್ರಕರಣದಲ್ಲಿ ತರದಿರುವುದು ಕ್ಷೇಮ ಎಂದು ಸಿಎಂಗೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಕೆಲ ಕಾಂಗ್ರೆಸ್ ನಾಯಕರು ತಮ್ಮ ಗೆಲುವಿಗೆ ದರ್ಶನ್ ಅವರು ಪ್ರಚಾರಕ್ಕೆ ಬಂದಿದ್ದು ಕೂಡ ಕಾರಣವಾಗಿದೆ. ಹೀಗಾಗಿ, ಅವರಿಗೆ ನಾವು ಈ ಸಮಯದಲ್ಲಿ ಸಹಾಯ ಮಾಡಬೇಕಾಗುತ್ತದೆ. ಸಾವೀಗೀಡಾದ ವ್ಯಕ್ತಿಗೆ ಬೇಕಾದ ನ್ಯಾಯ ಒದಗಿಸೋಣ, ಆದರೆ, ದರ್ಶನ್ ಅವರನ್ನು ಬಿಟ್ಟು ಉಳಿದವರ ಮೇಲೆ ಕ್ರಮವಾಗಲಿ, ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿ, ಪೊಲೀಸರಿಗೆ ಈ ನಿಟ್ಟಿನಲ್ಲಿ ಸೂಚನೆ ಕೊಡಿ ಎಂದು ಸಿಎಂಗೆ ಮನವಿ ಮಾಡಿದ್ದರಂತೆ.
ಸಿದ್ದರಾಮಯ್ಯ ಖಡಕ್ ಸೂಚನೆ: ಆದರೆ ತಮ್ಮದೇ ಪಕ್ಷದ ನಾಯಕರು ಮತ್ತು ಸಚಿವರ ಮಾತಿಗೆ ಖ್ಯಾರೆ ಎನ್ನದ ಸಿಎಂ ಸಿದ್ದರಾಮಯ್ಯ, ಅವರಿಗೆಲ್ಲ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ನಿಮ್ಮ ಕೆಲಸ ಎಷ್ಟಿದೆ ಅದನ್ನು ನೋಡಿಕೊಳ್ಳಿ. ಕೊಲೆ ಪ್ರಕರಣದಲ್ಲಿ ದೊಡ್ಡ ವ್ಯಕ್ತಿ ಎಂದ ಮಾತ್ರಕ್ಕೆ ಅವನ ಪರ ನಿಲ್ಲುವುದು ಸರಕಾರದ ನಿಲುವಲ್ಲ.
ನಮಗೆ ಇಡೀ ರಾಜ್ಯದ ಜನತೆಯ ನಿಲುವು ಮುಖ್ಯವೇ ಹೊರತು ಯಾವುದೇ ಒಬ್ಬ ನಟ ಮುಖ್ಯವಲ್ಲ. ನೀವು ಈ ಕುರಿತು ಮಾಧ್ಯಮಗಳಿಗೆ ಮಾತನಾಡುವುದಾರೂ, ವಿವೇಚನೆಯಿಂದ ವರ್ತಿಸಿ, ಈ ವಿಷಯದಲ್ಲಿ ಪೊಲೀಸರಿಗೆ ತನಿಖೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಯಾವುದೇ ಕಾರಣಕ್ಕೂ ಹಸ್ತಕ್ಷೇಪ ವಿಲ್ಲ ಎಂದು ನುಡಿದಿದ್ದಾರೆ ಎನ್ನಲಾಗಿದೆ.

