ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸ್ಫೋಕನ್ ಇಂಗ್ಲೀಷ್ : ರಾಜ್ಯ ಸರಕಾರದ ಹೊಸ ಪ್ರಯೋಗ
ಬೆಂಗಳೂರು: ರಾಜ್ಯ ಸರಕಾರಿ ಶಾಲೆಯ ಮಕ್ಕಳು ಮುಂದಿನ ವರ್ಷದಿಂದ ಸ್ಫೋಕನ್ ಇಂಗ್ಲೀಷ್ ತರಬೇತಿ ಪಡೆಯಲಿದ್ದು, ಸರಕಾರದಿಂದ ಈ ಕುರಿತು ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ.
ಕಳೆದ ವರ್ಷವೇ ವಾರಾಂತ್ಯದಲ್ಲಿ ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ಸ್ಫೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ಯೋಜಿಸಲಾಗಿತ್ತು. ಪ್ರಾದೇಶಿಕ ಇಂಗ್ಲೀಷ್ ಸಂಸ್ಥೆ ಮಾಸ್ಟರ್ ತರಬೇತುದಾರರಿಗೆ ರಾಜ್ಯ ಮಟ್ಟದ ತರಬೇತಿಯನ್ನು ನೀಡಿದ್ದರೂ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿರಲಿಲ್ಲ.
ಸಾರ್ವಜನಿಕ ಶಿಕ್ಷಣ ಇಲಾಖೆ ಈ ಶೈಕ್ಷಣಿಕ ವರ್ಷದಲ್ಲಿ 180 ಗಂಟೆಗಳ ಸ್ಫೋಕನ್ ಇಂಗ್ಲೀಷ್ ತರಗತಿ ನಡೆಸಲು ಚಿಂತನೆ ನಡೆಸಿದೆ. ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಸುಮಾರು 1000 ಶಾಲೆಗಳನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಒಳಗೊಂಡು ಈ ಯೋಜನೆ ಸಿದ್ಧಗೊಳ್ಳಲಿದೆ.
ಸ್ಪೋಕನ್ ಇಂಗ್ಲೀಷ್ ತರಗತಿ ನಿರ್ವಹಣೆಗೆ ಒಬ್ಬ ಅತಿಥಿ ಶಿಕ್ಷಕರನ್ನು ಸರಕಾರದ ವತಿಯಿಂದ ನೇಮಿಸಲಾಗುತ್ತದೆ. ಸ್ಥಳ, ವಸ್ತುಗಳ ಹೆಸರು ಗುರುತಿಸುವುದರಿಂದ ಹಿಡಿದು ಚಿತ್ರಗಳ ಆಧಾರದಲ್ಲಿ ವಾಕ್ಯಗಳ ರಚನೆ ಮಾಡುವ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. 4190 ಸರಕಾರಿ ಶಾಲೆಗಳು ಇಂಗ್ಲೀಷ್ ವಿಭಾಗವನ್ನು ಹೊಂದಿದ್ದು, ಹಿಂದಿನ ಬಜೆಟ್‌ನಲ್ಲಿ 4000 ಇಂತಹ ಶಾಲೆಗಳನ್ನು ಘೋಷಣೆ ಮಾಡಿದೆ.


