ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ ಪೂರ್ಣ
ಮೈಸೂರು: ದಲಿತ ಸಮುದಾಯದ ಪ್ರಭಾವಿ ನಾಯಕ ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆ ಬೌದ್ಧ ಸಂಪ್ರದಾಯದ ಪ್ರಕಾರ ಮೈಸೂರಿನಲ್ಲಿ ನೆರವೇರಿತು.
ಅಂಗಾAಗ ವೈಫಲ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಮೈಸೂರಿನ ಅಶೋಕ ನಗರದ ಬಳಿಯಿರುವ ಡಾ. ಬಿ.ಆರ್. ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ನೆರವೇರಿಸಲಾಯಿತು. ಅಂತ್ಯಕ್ರಿಯೆಯು ಬೌದ್ಧ ಸಂಪ್ರದಾಯದ ಪ್ರಕಾರವೇ ನಡೆಯಿತು.
ಮೈಸೂರಿನ ಶ್ರೀನಿವಾಸ್ ಪ್ರಸಾದ್ ಅವರ ನಿವಾಸ, ಭೀಮಸದನದಿಂದ ಮೆರವಣಿಗೆ ಮೂಲಕ ಅವರ ಪಾರ್ಥೀವ ಶರೀರವನ್ನು ಅಂಬೇಡ್ಕರ್ ಟ್ರಸ್ಟ್ಗೆ ತರಲಾಯಿತು. ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಹಲವು ಬೌದ್ಧ ಬಿಕ್ಕುಗಳು, ಬಂತೇಜಿಗಳು ಭಾಗವಹಿಸಿದ್ದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿ ಎಲ್ಲ ಪಕ್ಷದ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬೌದ್ಧ ಬಂತೇಜಿಗಳು ಮತ್ತು ಉರಿಪೆದ್ದಿಲಿಂಗ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಿದವು. ಪ್ರಸಾದ್ ಅವರ ಮೂವರು ಹೆಣ್ಣು ಮಕ್ಕಳು ಮತ್ತು ಅಳಿಯಂದಿರು ಹಾಗೂ ಅವರ ಅಪಾರ ಬಂಧುಬಳಗ ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.