ಧಾರವಾಡ: ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಡಿ ನಗರದಲ್ಲಿ ಇಂದು ಹುಚ್ಚು ನಾಯಿಯೊಂದು ಏಕಾಏಕಿ ದಾಳಿ ನಡೆಸಿ ಒಟ್ಟು ಒಂಬತ್ತು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಸ್ಥಳೀಯರು ಕೊನೆಗೆ ತಾವೇ ಮುಂದಾಗಿ ನಾಯಿಯನ್ನು ಸಂಹರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಿಗ್ಗೆಯಿಂದಲೇ ಬಡಾವಣೆಯಲ್ಲಿ ಅಟ್ಟಹಾಸ ಮೆರೆದ ಈ ನಾಯಿ, ದಾರಿಯಲ್ಲಿ ಸಂಚರಿಸುತ್ತಿದ್ದ ನಾಗರಿಕರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಮಧ್ಯಾಹ್ನದ ವೇಳೆಗೆ ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ನಾಯಿಯ ಕಚ್ಚುಗೆಗೆ ಒಳಗಾಗಿದ್ದು, ಇಡೀ ಶಿರಡಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಗಾಯಾಳುಗಳಿಗೆ ಆಸ್ಪತ್ರೆ ಚಿಕಿತ್ಸೆ
ನಾಯಿ ದಾಳಿಯಿಂದ ಶೀತಲ್ ಕಬಾಡಿ, ಗಂಗವ್ವ ಉಪ್ಪಾರ್, ಲಕ್ಷ್ಮೀ ಮಾದರ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಆರು ಮಂದಿಯನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪಂಚಾಯಿತಿ ವಿರುದ್ಧ ಸಾರ್ವಜನಿಕರ ಕಿಡಿಕಾರಿಕೆ
ನಾಯಿ ಹಾವಳಿ ಕುರಿತು ಬೆಳಿಗ್ಗೆಯೇ ಸ್ಥಳೀಯ ನಿವಾಸಿಗಳು ಕ್ಯಾರಕೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿಯ ಅಲಕ್ಷ್ಯವೇ ಇಷ್ಟೊಂದು ಜನರಿಗೆ ಗಾಯಗಳಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರೋಸಿಹೋದ ಜನರಿಂದಲೇ ಶ್ವಾನ ಸಂಹಾರ
ಪಂಚಾಯಿತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಸ್ಥಳೀಯರು ಸ್ವತಃ ಮುಂದಾಗಿ ನಾಯಿಯನ್ನು ಹಿಡಿಯುವ ಕಾರ್ಯಾಚರಣೆಗೆ ಇಳಿದರು. ಹತ್ತಾರು ಮಂದಿ ಸೇರಿ ನಾಯಿಯನ್ನು ಬೆನ್ನಟ್ಟಿ ಕಲ್ಲು ಹಾಗೂ ಕಬ್ಬಿಣದ ಉಪಕರಣಗಳಿಂದ ಹೊಡೆದು ಕೊಂದಿದ್ದಾರೆ. ನಾಯಿಯ ಸಾವಿನ ಬಳಿಕವೇ ಬಡಾವಣೆಯ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

