ಶಿವಮೊಗ್ಗ: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 10,800 ಶಿಕ್ಷಕರನ್ನು ನೇಮಕ ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಕರ ಕೊರತೆ ನಿವಾರಣೆ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಈಗಾಗಲೇ 14,499 ಪೂರ್ಣಾವಧಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಜೊತೆಗೆ, ಇದೇ ಮೊದಲ ಬಾರಿಗೆ 51,000 ಅತಿಥಿ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು. ಇದರಿಂದ ಸರ್ಕಾರಿ ಶಾಲೆಗಳ ಬೋಧನಾ ವ್ಯವಸ್ಥೆಗೆ ಮತ್ತಷ್ಟು ಸ್ಥಿರತೆ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದ 5,000 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳು ಹಾಗೂ ಸ್ಮಾರ್ಟ್ ಕ್ಲಾಸ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಗಾಗಿ ಸರ್ಕಾರ 160 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ತಂತ್ರಜ್ಞಾನ ಆಧಾರಿತ ಕಲಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಇದೇ ಸಂದರ್ಭದಲ್ಲಿ ‘ಒನ್ ಡಿಸ್ಟ್ರಿಕ್ಟ್, ಒನ್ ಡೆಸ್ಟಿನೇಷನ್’ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಗೂಡವಿ ಪಕ್ಷಿಧಾಮವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಯೂ ಘೋಷಿಸಲಾಯಿತು. ಜೊತೆಗೆ, ಶ್ರೀ ಚಂದ್ರಗುಟ್ಟಿ ರೇಣುಕಾಂಬಾದೇವಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಯಾತ್ರಾಕೇಂದ್ರದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

