ಸರಕಾರಿ ಜಮೀನು ಒತ್ತುವಾರಿದಾರರಿಗೆ ಕಾದಿದೆ ಕಂಟಕ
ಮೈಸೂರು : ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗಗಳ ಪಟ್ಟಿಯನ್ನು ಜುಲೈ ಅಂತ್ಯದೊಳಗೆ ಬಿಡುಗಡೆಗೊಳಿಸಿ ನಂತರ ವಶಪಡಿಸಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಭೆ. ಮೈಸೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಇಂದು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಮಂಗಳೂರು, ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು. ಸಭೆಯಲ್ಲಿ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಹಿನ್ನೆಲೆ ಮುಂಜಾಗ್ರತ ಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಸರಕಾರಿ ಜಾಗಗಳ ರಕ್ಷಿಸುವ ಸರ್ವೆ ಶುರುವಾಗಿದೆ, ಒಟ್ಟು 14 ಲಕ್ಷ ಸರಕಾರಿ ಜಾಗಗಳಿವೆ, ಇವುಗಳಲ್ಲಿ ಒತ್ತುವರಿ ಎಷ್ಟು ಆಗಿದೆ ಎಂಬ ಸರ್ವೆ ಶುರು ಮಾಡಿದ್ದೇವೆ. ಜುಲೈ ಅಂತ್ಯಕ್ಕೆ ಸರ್ವೆ ಮುಗಿಯಲಿದೆ ನಂತರ ಒತ್ತುವರಿ ತೆರವು ಆರಂಭಿಸುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕವಾಗಿ ಒತ್ತುವರಿ ಜಾಗದ ವಿಚಾರ ತಿಳಿಸಿ ತೆರವು ಮಾಡುತ್ತೇವೆ, ಇಲಾಖೆಯಲ್ಲಿ ಆಡಳಿತ ಚುರುಕುಗೊಳಿಸಲು ಇ ಆಫೀಸ್ ತೆಗೆಯಲಾಗುವುದು ಇದರಿಂದ ಅತಿ ಬೇಗನೆ ಕಾರ್ಯ ನಿರ್ವಹಿಸಬಹುದು ಹಾಗೂ ಉಳಿದಿರುವ ಕಡತಗಳ ವಿಲೇವಾರಿ ಸಾಧ್ಯವಿದೆ. ಅಧಿಕಾರಿಗಳಿಗೂ ಹಾಗೂ ಸಾರ್ವಜನಿಕರಿಗೂ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈಗ ಸಮೃದ್ಧಿಯಾದ ಮಳೆಯಾಗಿದೆ.
ಇದುವರೆಗೂ ಒಟ್ಟು 20 ಜನ ಮೃತಪಟ್ಟಿದ್ದಾರೆ, ಮಳೆಯಿಂದ ಉಂಟಾದ ಹಾನಿಗೆ ಪರಿಹಾರ ಕೊಡುವಷ್ಟು ಹಣ ನಮ್ಮಲ್ಲಿದೆ. ಸದ್ಯಕ್ಕೆ ಕೇಂದ್ರದಿಂದ ಪರಿಹಾರ ಕೇಳುವ ಸ್ಥಿತಿ ಇಲ್ಲ, ಮುಂದೆ ಮಳೆ ಹೆಚ್ಚಾಗಿ ನಷ್ಟ ಹೆಚ್ಚಾದರೆ ಪರಿಹಾರವನ್ನು ಕೇಳುತ್ತೇವೆ.
ರಾಜ್ಯದ 31 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆಯಾಗಿದೆ. 31 ಜಿಲ್ಲೆಗಳಲ್ಲಿ 208 ಮಿಮಿ ವಾಡಿಕೆ ಮಳೆಯ ನಿರೀಕ್ಷೆ ಇತ್ತು. ಇಡಿ ರಾಜ್ಯದ್ಯಂತ 205ಮಿಮಿ ಮಳೆ ಆಗಿದೆ ಎಂದರು.
ಜನಸಾಮಾನ್ಯರ ಆಸ್ತಿ, ಪ್ರಾಣಕ್ಕೆ ತೊಂದರೆ ಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳ ಸಭೆ ಕರೆದಿದ್ದೇವೆ. ಜೊತೆಗೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಹಿನ್ನೆಲೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಒಂಭತ್ತು ಜಿಲ್ಲೆಯ ಡಿಸಿ, ತಹಸೀಲ್ದಾರ್ ಗಳ ಸಭೆ ಮಾಡುತ್ತಿದ್ದೇವೆ, ಮಳೆಯಿಂದ ಯಾವುದೇ ಹಾನಿಯಾಗದ ರೀತಿಯಲ್ಲಿ ಕ್ರಮ ವಹಿಸಲು ಸಿದ್ದಗುತ್ತಿದ್ದೇವೆ ಎಂದು ತಿಳಿಸಿದರು.


