ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳ ಸಂಖ್ಯೆಯೂ ವೇಗವಾಗಿ ಹೆಚ್ಚಾಗಿದೆ. ನಗರದಲ್ಲಿ ಪಿಜಿ ವ್ಯವಹಾರ ಅತ್ಯಂತ ಲಾಭದಾಯಕ ಕ್ಷೇತ್ರವಾಗಿ ಬೆಳೆದಿದ್ದು, ಒಂದೇ ಪಿಜಿಯಿಂದ ಆರಂಭಿಸಿದವರು ಕೆಲವೇ ವರ್ಷಗಳಲ್ಲಿ ಹಲವು ಪಿಜಿಗಳ ಮಾಲೀಕರಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ಇದರ ಹೊರೆಯನ್ನು ಭರಿಸುವವರು ಅಲ್ಲಿ ವಾಸಿಸುವ ನಿವಾಸಿಗಳು; ಹೆಚ್ಚಿನ ಬಾಡಿಗೆ ನೀಡಿ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಅನುಭವಿಸುವ ಸ್ಥಿತಿ ಕಂಡುಬರುತ್ತಿದೆ.
ಈ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳು ಶಿವಾಜಿನಗರ ಮತ್ತು ಚಿಕ್ಕಪೇಟೆ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯಾಧಿಕಾರಿಗಳ ತಂಡ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿಗೃಹಗಳಿಗೆ ಭೇಟಿ ನೀಡಿ ನಿಯಮಾನುಸಾರ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿತು.
ಪರಿಶೀಲನೆ ವೇಳೆ ಹಲವು ಪಿಜಿಗಳಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ಸ್ವಚ್ಛತೆಯ ಕೊರತೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ, ಅಗ್ನಿ ಸುರಕ್ಷತಾ ಕ್ರಮಗಳ ಅನುಸರಣೆ ಇಲ್ಲದಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ ತಕ್ಷಣದ ಕ್ರಮವಾಗಿ 6 ಪಿಜಿ ವಸತಿಗೃಹಗಳನ್ನು ಮುಚ್ಚಿಸಲಾಗಿದ್ದು, ಒಟ್ಟಾರೆ ₹1.96 ಲಕ್ಷ ದಂಡ ವಿಧಿಸಲಾಗಿದೆ.
ಅಧಿಕಾರಿಗಳು ಪಿಜಿ ಮಾಲೀಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಅಡುಗೆ ಕೋಣೆ, ಅಗ್ನಿಶಾಮಕ ಉಪಕರಣಗಳ ಅಳವಡಿಕೆ, ಸಿಸಿಟಿವಿ ಕ್ಯಾಮರಾಗಳು, FSSAI ಆಹಾರ ಸುರಕ್ಷತಾ ಪ್ರಮಾಣಪತ್ರ, ಉತ್ತಮ ಶೌಚಾಲಯಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿ ಸರಿಪಡಿಸುವಂತೆ ಸೂಚಿಸಿದ್ದಾರೆ. ಈ ಎಲ್ಲಾ ದೋಷಗಳನ್ನು ಸರಿಪಡಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ.
ಪರಿಶೀಲನೆಯ ವೇಳೆ ಮತ್ತೊಂದು ಆತಂಕಕಾರಿ ಸಂಗತಿ ಕೂಡ ಹೊರಬಂದಿದೆ. ಬೆಂಗಳೂರು ಪೂರ್ವ ವಲಯದ ವ್ಯಾಪ್ತಿಯಲ್ಲಿ ಅನೇಕ ಪಿಜಿಗಳು ಪರವಾನಗಿ ಇಲ್ಲದೇ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಅಂದಾಜು 165 ಅನಧಿಕೃತ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನುಬಾಹಿರವಾಗಿ ನಡೆಯುವ ವಸತಿಗೃಹಗಳ ಮೇಲೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

