ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವರ್ಷಗಳಿಂದ ಕಾಡುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳಂತೆ, ಇನ್ನುಮುಂದೆ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿದ ಮನೆಗಳಿಂದ ಮಾತ್ರ ಕಸ ಸಂಗ್ರಹಿಸಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ GBA ಸ್ಪಷ್ಟ ಎಚ್ಚರಿಕೆ ನೀಡಿದೆ.
ನಗರದಲ್ಲಿ ಹಬ್ಬ–ಹರಿದಿನಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ತ್ಯಾಜ್ಯ ಹೆಚ್ಚಾಗುವ ಕಾರಣ ಸಮಸ್ಯೆ ತೀವ್ರವಾಗುತ್ತಿತ್ತು. ಈ ಹಿನ್ನೆಲೆ, ಕಸ ವಿಲೇವಾರಿ ವ್ಯವಸ್ಥೆಯನ್ನು ಶಿಸ್ತಿನೊಳಗೆ ತರಲು GBA ಹೊಸ ನಿಯಮಗಳನ್ನು ಕಡ್ಡಾಯಗೊಳಿಸಿದೆ. GBA ವ್ಯಾಪ್ತಿಯಲ್ಲಿರುವ ಮನೆಗಳಿಂದ ಮಿಶ್ರ ತ್ಯಾಜ್ಯವನ್ನು ಸ್ವೀಕರಿಸಬಾರದು ಎಂಬ ಷರತ್ತನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.
ತ್ಯಾಜ್ಯ ವಿಂಗಡಣೆ ಕಡ್ಡಾಯ
GBA ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕಸ ಸಂಗ್ರಹಣೆ, ತ್ಯಾಜ್ಯ ವರ್ಗಾವಣೆ ಮತ್ತು ರಸ್ತೆ ಗುಡಿಸುವ ಕಾರ್ಯಗಳಿಗೆ ಸಂಬಂಧಿಸಿದಂತೆ ₹544.91 ಕೋಟಿ ಮೊತ್ತದ 33 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಪಡೆದ ಗುತ್ತಿಗೆದಾರರು ಪ್ರತಿದಿನ ಬೆಳಗ್ಗೆ 6:30ರೊಳಗೆ ಮನೆಗಳಿಗೆ ಭೇಟಿ ನೀಡಿ ಕಸ ಸಂಗ್ರಹಿಸಬೇಕು. ಈ ವೇಳೆ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿಯೇ ಸ್ವೀಕರಿಸಬೇಕು. ಮನೆಮಂದಿ ಕಸವನ್ನು ವಿಂಗಡಿಸದೆ ನೀಡಿದರೆ ಅದನ್ನು ಸಂಗ್ರಹಿಸಬಾರದು ಎಂಬುದು ನಿಯಮ.
ಮಿಶ್ರ ತ್ಯಾಜ್ಯ ನೀಡಿದ ಮನೆಗಳ ಕುರಿತು ಫೋಟೋ ಅಥವಾ ವೀಡಿಯೊ ದಾಖಲಿಸಿ ಸಂಬಂಧಪಟ್ಟ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ನಿಯಮ ಉಲ್ಲಂಘಿಸಿ ಮಿಶ್ರ ತ್ಯಾಜ್ಯ ಸಂಗ್ರಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ ಎಂದು GBA ತಿಳಿಸಿದೆ.
ದೂರುಗಳ ಆಧಾರದಲ್ಲಿ ದಂಡ
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯೊಳಗೆ ತ್ಯಾಜ್ಯ ಸಂಗ್ರಹ ಪ್ರಕ್ರಿಯೆ ಆರಂಭವಾಗಬೇಕು. ಗುತ್ತಿಗೆ ಷರತ್ತುಗಳನ್ನು ಪಾಲಿಸದಿದ್ದರೆ ಮೊದಲಿಗೆ 90 ದಿನಗಳಾವಧಿ ನೀಡಲಾಗುತ್ತದೆ. ಈ ಅವಧಿಯಲ್ಲೂ ಸುಧಾರಣೆ ಆಗದಿದ್ದರೆ ಗುತ್ತಿಗೆ ರದ್ದಾಗಲಿದೆ.
ಮನೆಯಿಂದ ಪ್ರತಿದಿನ ಕಸ ಸಂಗ್ರಹವಾಗುತ್ತಿಲ್ಲ ಎಂಬ ಬಗ್ಗೆ 10ಕ್ಕಿಂತ ಕಡಿಮೆ ದೂರುಗಳು ಬಂದರೆ ದಂಡ ವಿಧಿಸುವುದಿಲ್ಲ. ಆದರೆ 10 ರಿಂದ 500 ದೂರುಗಳು ಬಂದಲ್ಲಿ ₹100 ದಂಡ ವಿಧಿಸಲಾಗುತ್ತದೆ. ಅದೇ ರೀತಿ, 500ಕ್ಕಿಂತ ಹೆಚ್ಚು ದೂರುಗಳು ಸತತವಾಗಿ ಮೂರು ತಿಂಗಳು ದಾಖಲಾಗಿದರೆ ಪ್ರತಿ ದೂರಿಗೂ ₹100 ದಂಡ ವಿಧಿಸಲಾಗುತ್ತದೆ.
ಅಕ್ರಮ ತ್ಯಾಜ್ಯ ವಿಲೇವಾರಿಗೆ ಭಾರಿ ದಂಡ
GBA ಹೊಸ ನಿಯಮಗಳ ಪ್ರಕಾರ, ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಪಾದಚಾರಿ ಮಾರ್ಗ, ರಸ್ತೆ ಹಾಗೂ ಮೇಲ್ಸೇತುವೆಗಳ ಸ್ವಚ್ಛತೆ ಪೂರ್ಣಗೊಳ್ಳಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ಗುತ್ತಿಗೆದಾರರಿಗೆ ₹50,000 ದಂಡದ ಜೊತೆಗೆ ಪೊಲೀಸ್ ಪ್ರಕರಣವೂ ದಾಖಲಾಗುತ್ತದೆ.
ಇದಲ್ಲದೆ, ಕಸ ಸಂಗ್ರಹಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಗುತ್ತಿಗೆದಾರರು ಹೊಂದಿರಬೇಕು. ಸಿಬ್ಬಂದಿಯ ಹಾಜರಾತಿಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ.

