ಅಪರಾಧ ಸುದ್ದಿ

ವಿದ್ಯಾರ್ಥಿಯಿಂದಲೇ ವಾರ್ಡನ್ ಸೇರಿ ಎಂಟು ಜನರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ: ಓರ್ವ ಸಾವು

Share It

ಬಳ್ಳಾರಿ: ವಿದ್ಯಾರ್ಥಿಯೋರ್ವ ವಾರ್ಡನ್ ಸೇರಿ 8 ಬಾಲಕರ ಮೇಲೆ ಕಬ್ಬಿಣದ ರಾಡ್​ ನಿಂದ ಏಕಾಏಕಿ ಹಲ್ಲೆ ನಡೆಸಿದ ಘಟನೆ ನಗರದ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಘಟನೆ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿದ್ದು, ಇನ್ನುಳಿದವರು ಗಾಯಗೊಂಡಿದ್ದು ಬಳ್ಳಾರಿ ಬಿಮ್ಸ್ ಮತ್ತು ಟ್ರಾಮಾಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್​ ನಲ್ಲಿ ಶನಿವಾರ ರಾತ್ರಿ ಊಟ ಮಾಡಿ ಎಲ್ಲ ವಿದ್ಯಾರ್ಥಿಗಳು ಮಲಗಿದ ಮೇಲೆ 9ನೇ ತರಗತಿ ವಿದ್ಯಾರ್ಥಿ ಮಂಚದ ರಾಡ್​ ತೆಗೆದುಕೊಂಡು ದಾಳಿ ಮಾಡಿದ್ದಾನೆ.

ವಾರ್ಡನ್ ಸೇರಿ ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮನಬಂದತೆ ಹಲ್ಲೆ ನಡೆಸಿದ್ದಾನೆ. ಇದರಿಂದ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇನ್ನುಳಿದವರು ಗಾಯಗೊಂಡಿದ್ದಾರೆ. ಹಲ್ಲೆ ಬಳಿಕ ಆರೋಪಿ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಬಾಲಕ ಆಂಧ್ರಪ್ರದೇಶದ ಅದವಾನಿಯ ಹೇಮಂತ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ (ವಿಮ್ಸ್) ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಬಳ್ಳಾರಿ ಹೊರವಲಯದ ಗುರುಕುಲ ಶಾಲೆಯ ಘಟನೆಯಲ್ಲಿ ದುರಾದೃಷ್ಟವಶಾತ್ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಓರ್ವ ಬಾಲಕನಿಗೆ ಸ್ವಲ್ಪ ಗಂಭೀರವಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಸುಕೋ ಟೀಂ, FSL ಟೀಂ ಭೇಟಿ ನೀಡಿದೆ. ಈ ಕುರಿತು ತನಿಖೆ ಮಾಡಲಾಗುತ್ತಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಆಡಳಿತ ಮಂಡಳಿ ಮುಖ್ಯಸ್ಥರನ್ನು ಸ್ಥಳಕ್ಕೆ ಕರೆಸುವಂತೆ ಎಸ್​ಪಿ ಸುಮನ್ ಡಿ ಪನ್ನೇಕರ್ ಅವರಿಗೆ ಒತ್ತಾಯಿಸಿದರು. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಪೋಷಕರು ಆಸ್ಪತ್ರೆಗೆ ಆತಂಕದಲ್ಲಿ ಆಗಮಿಸಿದ್ದಾರೆ. ಇನ್ನು ಮೃತ ವಿದ್ಯಾರ್ಥಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮ್ಯಾನೇಜ್ಮೆಂಟ್ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದೇನೆ. ಹಲ್ಲೆ ಮಾಡಿದ ವಿದ್ಯಾರ್ಥಿ ಮಾನಸಿಕ ಅಸ್ವಸ್ಥ ಅಥವಾ ಡ್ರಗ್ಸ್ ಸೇವಿಸಿರಬಹುದು ಎಂದು ಮೃತ ಬಾಲಕನ ತಂದೆ ಲಕ್ಷ್ಮೀಕಾಂತ್ ಅನುಮಾನ ವ್ಯಕ್ತಪಡಿಸಿದ್ದಾರೆ.


Share It

You cannot copy content of this page