ಬೆಂಗಳೂರು: ಬಿಜೆಪಿ ಅಧಿಕಾರವಾಧಿಯ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಬೃಹತ್ ಹಗರಣದ ಕುರಿತು ನ್ಯಾ.ಮೈಕೇಲ್ ಡಿ ಕುನ್ಹಾ ಅವರ ವರದಿ ಇಂದು ಸರಕಾರಕ್ಕೆ ಸಲ್ಲಿಕೆಯಾಗಿದೆ.
ನ್ಯಾಯಾಧೀಶ ಕುನ್ಹಾ ಅವರು, ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ಸಮ್ಮುಖದಲ್ಲಿ ಸರಕಾರದ ಮುಖ್ಯಕಾರ್ಯದರ್ಶಿ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಿದರು. ಇದು ಅಂತಿಮ ವರದಿಯಾಗಿದ್ದು, ವರದಿಯಲ್ಲಿ ಆ ಸಂದರ್ಭದಲ್ಲಿ ನಡೆದಿರುವ ಹಗರಣಗಳ ಉಲ್ಲೇಖ ಮಾಡಲಾಗಿದೆ.
ಈ ಹಿಂದೆಯೇ ಸಾಂದರ್ಭಿಕ ವರದಿಯನ್ನು ಕುನ್ಹಾ ಅವರು ಸರಕಾರಕ್ಕೆ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಅಂದಿನ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹಾಗೂ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಯಮಬಾಹಿರವಾಗಿ ಕೆಲವು ಕ್ರಮಗಳನ್ನು ತೆಗೆದುಕೊಂಡಿರುವುದು ಬೆಳಕಿಗೆ ಬಂದಿತ್ತು.
ಇದೀಗ ಪೂರ್ಣ ವರದಿ ಸರಕಾರದ ಕೈಸೇರಿದ್ದು, ಬೆಡ್ ಖರೀದಿ, ಮಾಸ್ಕ್ ಮತ್ತು ಸ್ಯಾನಿಟೈಸರ್, ಪಿಪಿ ಕಿಟ್ ಖರೀದಿಯಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ನಾಯಕರಿಗೆ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.

