ಬೆಂಗಳೂರು: ಏರ್ ಇಂಡಿಯಾ ಕಂಪನಿಯ ಸಿಬ್ಬಂದಿಗಳ ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ 175 ವಿಮಾನಗಳ ಹಾರಾಟ ರದ್ದಾಗಿದ್ದು, ಸಂಸ್ಥೆಗೆ ಸುಮಾರು ೩೦ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಎರಡು ದಿನದಿಂದ 175 ವಿಮಾನಗಳ ಹಾರಾಟ ರದ್ದಾಗಿದೆ. ಗುರುವಾರ 100 ವಿಮಾನಗಳು ಹಾರಾಟ ನಿಲ್ಲಿಸಿದ್ದವು. ಶುಕ್ರವಾರ ಆ ಸಂಖ್ಯೆ 75 ಕ್ಕೆ ಇಳಿದಿದೆ. ಶನಿವಾರವೂ 40 ರಿಂದ 45 ವಿಮಾನಗಳ ಹಾರಾಟ ಸಾಧ್ಯವಾಗುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.
ಈಗಾಗಲೇ ಎರಡು ದಿನಗಳಲ್ಲಿ 175 ವಿಮಾನಗಳು ಹಾರಾಟ ನಡೆಸದ ಕಾರಣಕ್ಕೆ ಪ್ರಯಾಣಿಕರ ಟಿಕೆಟ್ ದರ ವಾಪಸ್ ನೀಡುವುದು ಮತ್ತು ಪರಿಹಾರ ರೂಪದಲ್ಲಿ ಪಾವತಿಸಬೇಕಾದ ಮೊತ್ತವನ್ನೆಲ್ಲ ಸೇರಿಸಿ 30 ಕೋಟಿ ರು. ನಷ್ಟವಾಗಲಿದೆ. ಶನಿವಾರವೂ ಸಮಸ್ಯೆ ಮುಂದುವರಿಯಲಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಭಾನುವಾರದ ವೇಳೆಗೆ ಎಲ್ಲವೂ ಸರಿಹೋಗಲಿದೆ ಎಂದು ಸಂಸ್ಥೆ ತಿಳಿಸಿದೆ.