ಬೆಂಗಳೂರು : ಹಿಂದೆ ಉದ್ಯಾನನಗರಿ ಎಂದು ಕರೆಸಿಕೊಳ್ಳುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷದ ಬೇಸಿಗೆಯಲ್ಲಿ ದಿನದಿಂದ ದಿನಕ್ಕೆ ಉರಿ ಬಿಸಿಲು ಜಾಸ್ತಿಯಾಗುತ್ತಿದೆ. ಇದು ನಗರದ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಜನರು ಬೆಂಗಳೂರಿನಲ್ಲಿ ಬಿಸಿಲಿನಿಂದ ರೋಸಿ ಹೋಗುತ್ತಿದ್ದಾರೆ. ಮತ್ತೊಂದು ಕಡೆ ನೀರಿನ ಸಮಸ್ಯೆಯೂ ಬಗೆಹರಿಯುತ್ತಿಲ್ಲ. ಹೀಗಾಗಿ ನಗರದಲ್ಲಿ ಜನರ ಓಡಾಟವೇ ಕಡಿಮೆಯಾಗಿ ಹೋಗಿದ್ದು, ರಣ ಬಿಸಿಲಿನ ತಾಪ ಇದೀಗ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ನಗರದ ಹೋಟೆಲ್ಗಳ ವಹಿವಾಟಿನಲ್ಲಿ ಶೇ. 30 ರಷ್ಟು ಕುಸಿತವಾಗಿರುವ ಬಗ್ಗೆ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ ರಾವ್ ಮಾಹಿತಿ ನೀಡಿದ್ದಾರೆ.
ಬಿಸಿಲು ಹೆಚ್ಚಾಗುತ್ತಿದ್ದಂತೆ ಮನೆಯಿಂದ ಹೊರ5 ಹೋಗುವುದನ್ನು ಆದಷ್ಟು ಕಡಿಮೆ ಮಾಡಿರುವ ಜನ ಹೋಟೆಲ್ಗೆ ಹೋಗುವುದನ್ನೂ ಕಡಿಮೆ ಮಾಡಿದ್ದಾರೆ. ಈ ಕಾರಣದಿಂದಾಗಿ ಹೋಟೆಲ್ ವ್ಯಾಪಾರ ವಹಿವಾಟು ಶೇ. 30 ರಷ್ಟು ಕುಸಿತವಾಗಿದೆ. ಮಧ್ಯಾಹ್ನ ಆಗುತ್ತಿದ್ದಂತೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮಧ್ಯಾಹ್ನದ ವೇಳೆ ಹೋಟೆಲ್‌ಗಳಿಗೆ ಜನರು ಬರುವುದೇ ಕಷ್ಟವಾಗಿ ಹೋಗಿದೆ. ಟೀ, ಕಾಫಿ ಕುಡಿಯುವುದಕ್ಕಾದರೂ ಅನೇಕರು ಹೋಟೆಲ್ಗೆ ಹೋಗುತ್ತಿದ್ದರು. ಈಗ ಬಿಸಿಲು ಜಾಸ್ತಿ ಇರುವ ಪರಿಣಾಮ ಟೀ, ಕಾಫಿ ಕುಡಿಯುವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ಹೋಟೆಲ್ ಉದ್ಯಮ ಕಷ್ಟವಿದೆ ಎಂದು ಅನೇಕ ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಈ ಬಿಸಿಲಿಗೆ ಹೋಟೆಲ್ಗೆ ಬರುವುದೇ ಕಷ್ಟ. ಈ ಬಿಸಿಯಲ್ಲಿ ಊಟ, ತಿಂಡಿ ಮಾಡುವುದೇ ಕಷ್ಟವಾಗುತ್ತಿದೆ. ಹೀಗಾಗಿ ನಾವು ಹೋಟೆಲ್‌ಗಳಿಗೆ ಬರುವುದನ್ನೇ ಕಡಿಮೆ ಮಾಡಿದ್ದೇವೆ. ಟೀ, ಕಾಫಿ ಬದಲು ಜ್ಯೂಸ್, ಎಳನೀರು ಕುಡಿಯುತ್ತಿದ್ದೇವೆ ಎಂದು ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ.
ಇನ್ನೂ 5 ದಿನ ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ರಣ ಬಿಸಿಲಿನ ತಾಪ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮಧ್ಯೆ, ಬೆಂಗಳೂರಿನಲ್ಲಿ ಉಷ್ಣಾಂಶ ಈ ಬಾರಿ ಹಳೆ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಗರಿಷ್ಠ ತಾಪಮಾನ ಯಾವಾಗಲೂ ಒಂದು ಅಥವಾ ಎರಡು ದಿನ ಇರುತ್ತಿತ್ತು. ಆದರೆ ಈ ಬಾರಿ ಸತತವಾಗಿ 10 ದಿನಗಳಿಗೂ ಅಧಿಕ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಟಿ 40 ಡಿಗ್ರಿ ಆಸುಪಾಸಿನಲ್ಲೇ ಇದೆ.
ಕಳೆದ 2 ದಿನಗಳಿಂದ ಬೆಂಗಳೂರು ನಗರದಲ್ಲಿ 40 ರಿಂದ 41.3 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಮುಂದುವರೆಯಲಿದೆ. ಈ ಹಿಂದೆ 2016 ರ ಏಪ್ರಿಲ್ 25 ರಂದು ಬೆಂಗಳೂರು ನಗರದಲ್ಲಿ 39.2 ಉಷ್ಣಾಂಶ ದಾಖಲಾಗಿದ್ದೇ ಗರಿಷ್ಠ ಉಷ್ಣಾಂಶವಾಗಿತ್ತು.