ಸುದ್ದಿ

ಜಯನಗರ ರಿಸಲ್ಟ್ ವಿವಾದ : ಸೌಮ್ಯಾ ರೆಡ್ಡಿ ಅವರಿಗೆ ಮತ್ತೊಂದು ಗೆಲುವು: ಶಾಸಕ ರಾಮಮೂರ್ತಿಗೆ ಹಿನ್ನಡೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Share It

ನವದೆಹಲಿ : ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಸಂಬಂಧ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಜಯನಗರ ಶಾಸಕ ರಾಮಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಜಯನಗರದ 16 ಮತಗಳ ಗೆಲುವಿನ ಗುಟ್ಟು ಇನ್ನೂ ಬಗೆಹರಿದಿಲ್ಲ. ಮತ ಎಣಿಕೆ ಸರಿಯಾದ ಕ್ರಮದಲ್ಲಿ ಆಗಿಲ್ಲ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೌಮ್ಯ ರೆಡ್ಡಿ ಅವರು ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ತಡೆ ನೀಡುವಂತೆ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಟ್ರಯಲ್​​ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಪೀಠ ವಜಾ ಮಾಡಿ ಆದೇಶ ಹೊರಡಿಸಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಮಮೂರ್ತಿ ಅವರು ಕಾಂಗ್ರೆಸ್​​​ನ ಸೌಮ್ಯಾ ರೆಡ್ಡಿ ಅವರನ್ನು 16 ಮತಗಳಿಂದ ಸೋಲಿಸಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಚುನಾವನಾಧಿಕಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡಿಲ್ಲ ಎಂದು ಸೌಮ್ಯ ರೆಡ್ಡಿ ಅವರು ಹೈಕೋರ್ಟ್​​ಗೆ ಫಲಿತಾಂಶ ತಕರಾರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಕರಣದ ಟ್ರಯಲ್ ತಡೆ ಕೋರಿ ರಾಮಮೂರ್ತಿ ಸಹ ಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್​ ರಾಮಮುರ್ತಿ ಅವರ ಅರ್ಜಿ ವಜಾ ಮಾಡಿತ್ತು. ಬಳಿಕ ಇದನ್ನು ಪ್ರಶ್ನಿಸಿ ರಾಮಮೂರ್ತಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಸುಪ್ರೀಂಕೋರ್ಟ್​​ನಲ್ಲೂ ಸಹ ಹಿನ್ನಡೆಯಾಗಿದೆ.

ಮೊದಲು ಕಾಂಗ್ರೆಸ್​​​ನ ಸೌಮ್ಯ ರೆಡ್ಡಿ ಅವರು 116 ಮತಗಳಿಂದ ಗೆದ್ದುಬೀಗಿದ್ದರು.  ಆದ್ರೆ, ಕೆಲ ಗೊಂದಲಗಳು ಏರ್ಪಟ್ಟಿದ್ದರಿಂದ ಮರು ಎಣಿಕೆಯಾದಾಗ ಫಲಿತಾಂಶ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಪರವಾಗಿಗಿತ್ತು. ಕೊನೆ ಕ್ಷಣದಲ್ಲಿ ರಿಸಲ್ಟ್ ಕೈಕೊಟ್ಟಿದ್ದರಿಂದ ಸೌಮ್ಯ ರೆಡ್ಡಿ ಸ್ಥಳದಲ್ಲೇ ಕಣ್ಣೀರಿಟ್ಟಿದ್ದರು. ಅಲ್ಲದೇ ಚುನಾವಣಾ ಆಯೋಗದ ಆದೇಶದನ್ವಯ ಮತ ಎಣಿಕೆ ಆಗಿಲ್ಲ. ಮರು ಮತ ಎಣಿಕೆ ನಿಯಮಬಾಹಿರವಾಗಿ ಆಗಿದೆ. 837 ಅಂಚೆ ಮತ ಮರು ಎಣಿಕೆ ಆಗಬೇಕು. ವಿಡಿಯೋ ಫೂಟೇಜ್ ಪರಿಶೀಲಿಸಬೇಕೆಂದು ಕೋರ್ಟ್​ ಮೊರೆ ಹೋಗಿದ್ದರು.


Share It

You cannot copy content of this page