ಹಾಸನ: ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರಜ್ ಪರ ಮೊದಲ ಸಂತ್ರಸ್ತನ ವಿರುದ್ಧ ದೂರು ನೀಡಿದ್ದಾತನೂ ಕೂಡ ಸೂರಜ್ ನಿಂದ ದೌರ್ಜನ್ಯ ಕ್ಕೆ ಒಳಗಾದವನೇ ಎಂದು ಹೇಳಲಾಗುತ್ತಿದೆ.
ಸೂರಜ್ ರೇವಣ್ಣ ತಮಗೆ ಅಸಹಜ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅರಕಲಗೂಡು ಮೂಲದ ಸಂತ್ರಸ್ತನೊಬ್ಬ ಮೂರು ದಿನಗಳ ಹಿಂದೆ ದೂರು ನೀಡಿದ್ದ. ಈ ಆರೋಪದಲ್ಲಿ ಸೂರಜ್ ಬಂಧನವಾಗಿದೆ. ಇದೀಗ ಪ್ರಕರಣ ಸಿಐಡಿಗೆ ವಹಿಸಲಾಗಿದೆ. ಆದರೆ, ಅದಕ್ಕೂ ಮೊದಲು ಸಂತ್ರಸ್ತ ಹಣಕ್ಕೆ ಬೇಡಿಕೆಯಿಟ್ಟು, ಸೂರಜ್ ಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತನ ವಿರುದ್ಧ ಸಹಾಯಕನ ಮೂಲಕ ದೂರು ಕೊಡಿಸಲಾಗಿತ್ತು.
ಸೂರಜ್ ಬಂಧನದ ನಂತರ ದೂರು ಕೊಟ್ಟ ವ್ಯಕ್ತಿಯೇ ನಾಪತ್ತೆಯಾಗಿದ್ದ. ಆದರೆ, ಆತ ಈಗ ಪ್ರತ್ಯಕಗಷವಾಗಿದ್ದು, ಸೂರಜ್ ವಿರುದ್ಧವೇ ಆರೋಪ ಮಾಡಿದ್ದಾನೆ. ನನಗೂ ಸೂರಜ್ ರೇವಣ್ಣ ಕರೋನಾ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿದ್ದಾನೆ. ಜತೆಗೆ ಮೊದಲ ಸಂತ್ರಸ್ತನ ವಿರುದ್ಧ ದೂರು ನೀಡುವಂತೆ ಬಲವಂತ ಮಾಡಿದ್ದರು, ಹೀಗಾಗಿಯೇ ನಾನು ದೂರು ನೀಡಿದ್ದೆ ಎಂದು ಅವಲತ್ತುಕೊಂಡಿದ್ದಾನೆ.
ಇದೀಗ ಈತನ ದೂರನ್ನು ಆಧರಿಸಿ, ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಗಾಗಲೇ ಬಂಧಿತನಾಗಿರುವ ಸೂರಜ್ ಗೆ ಮತ್ತೊಂದು ದೂರು, ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ತನ್ನ ಸಹಾಯಕನೇ ದೂರು ನೀಡಿದ್ದು, ಇಂತಹ ಆರೋಪಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಕೂಡ ಇದೆ.

