ಅಪರಾಧ ಸುದ್ದಿ

ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಹಾಗೂ ಯುವಕನ ಅನುಮಾನಾಸ್ಪದ ಸಾವು

Share It

ಬಳ್ಳಾರಿ: ನಗರದ ಕೆಎಂಎಫ್ ಡೈರಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ಬಾಡಿಗೆ ಇದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದೆ. ಮೃತರನ್ನು ಮಂಗಳಮುಖಿ ಸುಹಾಸಿನಿ (29) ಹಾಗೂ ಶೇಖರ್ ಅಲಿಯಾಸ್ ಮಣಿ (31) ಎಂದು ಗುರುತಿಸಲಾಗಿದೆ. ಶೇಖರ್ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ. ಸುಹಾಸಿನಿ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ಸುಹಾಸಿನಿ ಮಂಗಳಮುಖಿ ಎಂದು ಗೊತ್ತಿದ್ದರೂ ಶೇಖರ್ ಪ್ರೀತಿಸುತ್ತಿದ್ದು, ಕಳೆದ ಆರು ವರ್ಷಗಳಿಂದ ಇಬ್ಬರೂ ಒಟ್ಟಿಗೆ ವಾಸವಾಗಿದ್ದರು ಎನ್ನಲಾಗಿದೆ. ಸಾವಿನ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಣಕ್ಕಾಗಿ ಸುಹಾಸಿನಿಯ ಜೊತೆ ಇದ್ದ ಶೇಖರ್, ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಂಗಳಮುಖಿ ಸಮುದಾಯದ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಾವಿನ ಕಾರಣ ಮರಣೋತ್ತರ ವರದಿ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You cannot copy content of this page